ಮಡಿಕೇರಿ:
ಪತ್ರ ಬರೆಯುವುದು, ಅದನ್ನು ಅಂಚೆ ಡಬ್ಬಿಗೆ ಹಾಕುವುದು, ಸಂಬಂಧಿಸಿದವರಿಗೆ ಅದು ಯಾವಾಗ ತಲುಪಿರಬಹುದು ? ಅವರ ಉತ್ತರ ಯಾವಾಗ ಬರಬಹುದು ? ಎಂದು ಕುತೂಹಲದಿಂದ ಕಾಯುವುದು.. ಇದರಲ್ಲಿರುವ ಮಜಾ ಈಗಿನ ಮೊಬೈಲ್ ಜಮಾನದ ಮಕ್ಕಳಿಗೆ ಗೊತ್ತಿರಲು ಸಾಧ್ಯವೇ ಇಲ್ಲ. ಪತ್ರ ಬರೆಯುವುದು ಒಂದು ಭಾವನಾತ್ಮಕ ಪ್ರಕ್ರಿಯೆ. ಇದನ್ನೇ ಬಳಸಿಕೊಂಡು ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಭಾಗಿತ್ವ ಸಮಿತಿ ಹೊಸ ಪ್ರಯೋಗವೊಂದನ್ನು ಈ ಲೋಕಸಭಾ ಚುನಾವಣೆ ಸಮಯದಲ್ಲಿ ನಡೆಸುತ್ತಿದೆ.
ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಮತದಾನದ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳಲು ಮತದಾರರ ಶಿಕ್ಷಣ ಮತ್ತು ಸಭಾಗಿತ್ವ ಸಮಿತಿ ಒಂದಿಲ್ಲೊಂದು ಕಸರತ್ತು ನಡೆಸುತ್ತಲೇ ಇರುತ್ತದೆ. ರಂಗೋಲಿ ಸ್ಪರ್ಧೆ, ಬೀದಿ ನಾಟಕ, ರಂಗಗೀತೆ, ವಿವಿಧ ಕ್ರೀಡಾ ಸ್ಪರ್ಧೆ, ಸೈಕಲ್, ಬೈಕ್, ಕಾರು ರ‌್ಯಾಲಿ… ಹೀಗೆ ಮತದಾರರ ಜಾಗೃತಿಗಾಗಿ ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಮತದಾರರನ್ನು ಮತಗಟ್ಟೆಗಳ ಕಡೆಗೆ ಸೆಳೆಯುವ ಪ್ರಯತ್ನ ಪ್ರತಿ ಚುನಾವಣೆ ಸಂದರ್ಭದಲ್ಲೂ ಸಾಮಾನ್ಯ. ಇದರಿಂದ ಮತದಾನದ ಪ್ರಮಾಣ ಹೆಚ್ಚಳ ಆಗುತ್ತಿರುವುದನ್ನೂ ಮತದಾರರ ಶಿಕ್ಷಣ ಮತ್ತು ಸಭಾಗಿತ್ವ ಸಮಿತಿ ಗಮನಿಸುತ್ತಾ ಬಂದಿದೆ.
ಈ ಲೋಕಸಭಾ ಚುನಾವಣೆಯಲ್ಲೂ ಮತದಾನದ ಪ್ರಮಾಣ ಹೆಚ್ಚಿಸಲು ಮತದಾರರ ಶಿಕ್ಷಣ ಮತ್ತು ಸಭಾಗಿತ್ವ ಸಮಿತಿ ವತಿಯಿಂದ ಹಲವು ರೀತಿಯ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಕೊಡಗಿನಲ್ಲಿ ಸಮಿತಿಯ ವಿಶಿಷ್ಟ ಚಟುವಟಿಕೆಯೊಂದು ಗಮನ ಸೆಳೆಯುತ್ತಿದೆ. ಇಂದಿನ ತಲೆಮಾರಿನ ಮಕ್ಕಳು ಪರೀಕ್ಷೆಯ ಉದ್ದೇಶಕ್ಕೆ ತಮ್ಮ ಪಾಠಗಳ ಮೂಲಕವಷ್ಟೇ ಕಲಿಯುತ್ತಿರುವ ಪತ್ರ ಬರೆಯುವ ಚಟುವಟಿಕೆಗೆ ಪ್ರಾಯೋಗಿಕ ರೂಪ ಕೊಟ್ಟು ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಇರುವ ಮಕ್ಕಳಿಂದ ಅವರ ಪೋಷಕರಿಗೆ ಮತದಾನ ಜಾಗೃತಿಯ ಕುರಿತು ಪೋಸ್ಟ್ ಕಾರ್ಡ್‌ನಲ್ಲಿ ಪತ್ರ ಬರೆಸಲಾಗುತ್ತಿದೆ. ಮಕ್ಕಳು ಪತ್ರ ಬರೆಯುವುದನ್ನು ಕಲಿತ ಹಾಗೆಯೂ ಆಯಿತು, ಮತದಾನದ ಮಹತ್ವದ ಬಗ್ಗೆ ಮಕ್ಕಳಿಗೆ ಪೋಷಕರ ಮೂಲಕ ಅರಿವು ಮೂಡಿಸಿದ ಹಾಗೆಯೂ ಆಯಿತು ಎನ್ನುವ ಉದ್ದೇಶದಿಂದ ಈ ಚಟುವಟಿಕೆ ನಡೆಸಲಾಗುತ್ತಿದೆ.
ಜಿಲ್ಲೆಯ ವಸತಿ ನಿಲಯ ಮತ್ತು ವಸತಿ ಶಾಲೆಗಳಲ್ಲಿ ೧೨,೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ ಕೊಡಗಿನವರು ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಯ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮಾರ್ಗದರ್ಶನದಲ್ಲಿ ಮತದಾನ ಜಾಗೃತಿ ಬಗ್ಗೆ ಮಕ್ಕಳಿಂದ ಪೋಷಕರಿಗೆ ಪತ್ರ ಬರೆಸಲಾಗುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ’ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಿ’, ’ಮನೆಯಿಂದ ಮತಗಟ್ಟೆಗೆ ಬನ್ನಿ’, ’ನಿಮ್ಮ ಹಕ್ಕು ಚಲಾಯಿಸಿ’, ’ತಪ್ಪದೇ ಮತದಾನ ಮಾಡಿ’, ’೧೮ ವರ್ಷ ತುಂಬಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿ’, ’ನಮ್ಮ ಭವಿಷ್ಯಕ್ಕಾಗಿ ಮತದಾನ ಮಾಡಿ’ ಹೀಗೆ ಹಲವು ರೀತಿಯ ಸಂದೇಶಗಳನ್ನು ಬರೆದ ಪೊಸ್ಟ್ ಕಾರ್ಡ್‌ಗಳನ್ನು ಮಕ್ಕಳು ಪೋಷಕರಿಗೆ ಕಳುಹಿಸಿಕೊಟ್ಟು, ಮತದಾನಕ್ಕೆ ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ.
ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ ಮಾರ್ಗದರ್ಶನದಲ್ಲಿ ಪೋಸ್ಟ್ ಕಾರ್ಡ್ ಮೂಲಕ ಅರಿವು ಚಟುವಟಿಕೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲಾ ಹಾಸ್ಟೆಲ್ ಮತ್ತು ವಸತಿ ಶಾಲೆಗಳ ಮಕ್ಕಳು ಇದರಲ್ಲಿ ಭಾಗಹಿಸಿದ್ದಾರೆ. ಪತ್ರ ಬರೆದು ತಮ್ಮ ಪೋಷಕರಿಗೆ ಕಳುಹಿಸಿದ್ದಾರೆ. ಪತ್ರ ಎನ್ನುವುದು ಭಾವನಾತ್ಮಕ ವಿಷಯ ಆಗಿರುವುದರಿಂದ ಇದು ಹೆಚ್ಚು ಪರಿಣಾಮಕಾರಿ ಮಾರ್ಗವಾಗಿದೆ. ಈ ಚಟುವಟಿಕೆಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ಶೇಖರ್, ನೊಡಲ್ ಆಫೀಸರ್, ಮತದಾರರ ಶಿಕ್ಷಣ ಮತ್ತು ಸಭಾಗಿತ್ವ ಸಮಿತಿ, ಕೊಡಗು