ಬೆಂಗಳೂರು: ನಗರದ ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿ ಯೋಜನೆಯು ಲೂಟಿ ಉದ್ದೇಶ ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್ ಆಗಿದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಪರಸ್ಪರ ಸಿಎಂ ಕುರ್ಚಿ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬೀದಿನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ. ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಜನರು ಮತ್ತು ಸಂಘಟನೆಗಳು ಈಗಾಗಲೇ ನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ‘ಬೌ ಬೌ ಬಿರಿಯಾನಿ’ ಹಾಕುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.
ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆಯಾಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಬೀದಿನಾಯಿಗಳಿಗೆ ಬಿರಿಯಾನಿ ನೀಡಿ, ಅದರಲ್ಲಿ ಹಣ ಕೊಳ್ಳೆ ಹೊಡೆಯುವ ಸ್ಕೀಮ್ ತರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶು ಆಸ್ಪತ್ರೆ ನಿರ್ಮಿಸಬಹುದಿತ್ತು
ಬೀದಿನಾಯಿಗಳ ಆರೈಕೆಗೆ ನಗರದಲ್ಲಿ ಸುಸಜ್ಜಿತ ಪಶು ಆಸ್ಪತ್ರೆ ನಿರ್ಮಿಸಬಹುದಿತ್ತು. ಬೀದಿ ಬದಿಯಲ್ಲಿ ಬಿದ್ದಿರುವ ನಾಯಿ ಅಥವಾ ಅಪಘಾತಕ್ಕೊಳಗಾದ ನಾಯಿ ತಂದು ಚಿಕಿತ್ಸೆ ನೀಡಬಹುದು. ಅದನ್ನು ಬಿಟ್ಟು ಆಹಾರ ನೀಡುವ ಯೋಜನೆ ತಂದಿರುವುದು ಸರಿಯಲ್ಲ ಎಂದು ಅಶೋಕ್ ಹೇಳಿದರು. ನಾಯಿಗಳಿಗೆ ಮಾಂಸ ನೀಡುವುದರಿಂದ ಅವುಗಳು ಕ್ರೂರವಾಗಿ ವರ್ತಿಸಬಹುದು. ಈಗಾಗಲೇ ನಮ್ಮ ಸಾಮಾನ್ಯ ಆಹಾರಕ್ಕೆ ಹೊಂದಿಕೊಂಡಿರುವ ಅವುಗಳಿಗೆ ಇಂತಹ ಆಹಾರ ನೀಡುವುದರಿಂದ ಸಮಸ್ಯೆ ಉಂಟಾಗಬಹುದು. ಬಿಬಿಎಂಪಿಯ ಹಣವನ್ನು ತಿನ್ನಲು ದಾರಿ ಹುಡುಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹಣ ಹೊಡೆಯಲು ಬೆಕ್ಕು, ಹೆಗ್ಗಣಗಳಿಗೂ ಊಟ ನೀಡುತ್ತಾರೆ ಎಂದು ಲೇವಡಿ ಮಾಡದರು.