ಜಿಲ್ಲೆ

ಸೋಂಕಿತರ ಸಂಪರ್ಕವಿಲ್ಲದವರಿಗೂ ಪಾಸಿಟಿವ್!

ಹಾವೇರಿ: ಲಾಕ್​ಡೌನ್ 3.0 ವರೆಗೆ ಕರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮೇ 3ರಿಂದ ಸೋಂಕು ಹರಡಲು ಆರಂಭಗೊಂಡಿದ್ದು, ಒಂದೂವರೆ ತಿಂಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದರೂ ಇತ್ತೀಚೆಗೆ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ಹರಡುತ್ತಿರುವುದರಿಂದ ಕರೊನಾ ಸಮುದಾಯಕ್ಕೆ ಹರಡಿದೆಯೇ ಎಂಬ ಆತಂಕ ಎದುರಾಗಿದೆ.

ಆರಂಭದಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ಮಾತ್ರ ಸೋಂಕು ತಗುಲಿತ್ತು. ಅವರೆಲ್ಲವರೂ ಕ್ವಾರಂಟೈನ್​ನಲ್ಲಿದ್ದರಿಂದ ಅಷ್ಟೇನೂ ಆತಂಕ ಎದುರಾಗಿರಲಿಲ್ಲ. ಆದರೆ, ಇತ್ತೀಚೆಗೆ ಎಲ್ಲಿಯೂ ಪ್ರಯಾಣಿಸದ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕವಿಲ್ಲದವರಲ್ಲೂ ಕರೊನಾ ಪಾಸಿಟಿವ್ ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಭೀತಿ ಹುಟ್ಟಲು ಕಾರಣವಾಗಿದೆ.

ಮುಂಬೈನಲ್ಲಿ ಕಟ್ಟಡ ಕಾರ್ವಿುಕನಾಗಿದ್ದ ಸವಣೂರ ಪಟ್ಟಣದ 32 ವರ್ಷದ ವ್ಯಕ್ತಿ ಲಾರಿಯಲ್ಲಿ ಏ. 28ರಂದು ಜಿಲ್ಲೆಗೆ ಬಂದಿದ್ದ. ಏ. 29ರಂದು ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಮೇ 3ರಂದು ಅವರಿಗೆ ಸೋಂಕು ದೃಢಪಟ್ಟಿತ್ತು. ಇದಾದ ನಂತರ ಅವರ ಸಹೋದರ, ಮುಂಬೈಗೆ ಲಾರಿ ತೆಗೆದುಕೊಂಡು ಹೋಗಿದ್ದ ಅಂದಲಗಿಯ ಚಾಲಕ ಹೀಗೆ ಆರಂಭದಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರ ಮೂಲದವರಿಗೆ ಬಂದಿದ್ದವು.

ಗ್ರೀನ್ ಜೋನ್ ಆದ ಮರುದಿನವೇ ಸೋಂಕು ದೃಢ: ಜೂ. 13ರಂದು ಕರೊನಾ ಸೋಂಕಿತರೆಲ್ಲರೂ ಗುಣವಾಗಿ ಜಿಲ್ಲೆಯನ್ನು ಗ್ರೀನ್ ಜೋನ್ ಎಂದು ಘೊಷಿಸಲಾಗಿತ್ತು. ಇದಾದ ಮರುದಿನವೇ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಿತು. ಸೋಂಕಿತರ ಸಂಪರ್ಕ ಇಲ್ಲದವರಿಗೂ ಪಾಸಿಟಿವ್ ಬಂದಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ಈ ನಡುವೆ ಸವಣೂರು ತಾಲೂಕಿನ ಕಾರಡಗಿಯ ಆಶಾ ಕಾರ್ಯಕರ್ತೆ ಮತ್ತು ಸವಣೂರು ಪಟ್ಟಣದ ಗರ್ಭಿಣಿಯೊಬ್ಬರಿಗೆ ಭಾನುವಾರ ಕರೊನಾ ದೃಢಪಟ್ಟಿದೆ. ಜಿಲ್ಲಾಡಳಿತ ಈ ಇಬ್ಬರ ಟ್ರಾವೆಲ್ ಹಿಸ್ಟರಿಗಾಗಿ ತಡಕಾಡುವಂತಾಗಿದೆ. ಇವರಿಗೆ ಹೊರಗಿನ ವ್ಯಕ್ತಿಗಳ ಸಂಪರ್ಕ ಇಲ್ಲದಿದ್ದರೂ ಸೋಂಕು ತಗಲಿರುವುದು ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ. ಅಲ್ಲದೆ, ಶಿಗ್ಗಾಂವಿಯ ಕಂಟೇನ್ಮೆಂಟ್ ಜೋನ್​ನಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಮುಂಬರುವ ದಿನಗಳಲ್ಲಿ ಕರೊನಾ ವೈರಸ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಕಂಡುಬರುತ್ತಿದೆ.

ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು: ಈಗಾಗಲೇ ಕಂಟೇನ್ಮೆಂಟ್ ಜೋನ್ ಆಗಿರುವ ಶಿಗ್ಗಾಂವಿ ಪಟ್ಟಣದ ದೇಸಾಯಿಗಲ್ಲಿಯಲ್ಲಿ ವಾಸವಾಗಿದ್ದ 44 ವರ್ಷದ ಮಹಿಳೆ, 48 ವರ್ಷದ ಪುರುಷ, 23 ವರ್ಷದ ಪುರುಷ, 16 ವರ್ಷದ ಬಾಲಕಿ, 75 ವರ್ಷದ ವೃದ್ಧೆ, 20 ವರ್ಷದ ಮಹಿಳೆ, ಗೌಡರ ಓಣಿಯಲ್ಲಿ ವಾಸವಾಗಿದ್ದ 85 ವರ್ಷದ ವೃದ್ಧೆ, 45 ವರ್ಷ ಮಹಿಳೆ, 15 ವರ್ಷದ ಬಾಲಕಿ, 4 ವರ್ಷದ ಬಾಲಕ, 60 ವರ್ಷದ ಪುರುಷ, 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಎಲ್ಲರೂ ಕಂಟೇನ್ಮೆಂಟ್ ಜೋನ್​ನಲ್ಲಿದ್ದವರು. ಸವಣೂರಿನ 23 ವರ್ಷದ ಗರ್ಭಿಣಿಗೆ ಹಾಗೂ ಕಾರಡಗಿಯ 23 ವರ್ಷದ ಆಶಾ ಕಾರ್ಯಕರ್ತೆಗೆ ಹೇಗೆ ಸೋಂಕು ತಗುಲಿತು ಎಂಬುದು ಇನ್ನೂ ಪತ್ತೆಯಾಗಿಲ್ಲ.

ಆಶಾ ಕಾರ್ಯಕರ್ತೆ ವಿವಿಧೆಡೆ ಸಂಚಾರ ನಡೆಸಿದ್ದು, ಇವರ ಟ್ರಾವೆಲ್ ಹಿಸ್ಟರಿಯೂ ಪೂರ್ಣವಾಗಿ ಇನ್ನೂ ಸಿಕ್ಕಿಲ್ಲ. ಒಮ್ಮೆ ಧಾರವಾಡದ ಎಸ್​ಡಿಎಂ ಆಸ್ಪತ್ರೆಗೆ ಹಾಗೂ ಗದಗ ಜಿಲ್ಲೆ ಶಿರಹಟ್ಟಿಗೆ ಸಂಬಂಧಿಕರೊಬ್ಬರು ನಿಧನರಾದಾಗ ಅಲ್ಲಿಯ ಸ್ಮಶಾನಕ್ಕೆ ಹೋಗಿ ಬಂದಿದ್ದಾರೆ. ಅಲ್ಲದೆ, ನಿಯಮಿತವಾಗಿ ಕೆಲಸವನ್ನು ಮಾಡಿದ್ದಾರೆ. ಇವರಿಂದ ಇನ್ನೆಷ್ಟು ಜನರಿಗೆ ಸೋಂಕು ತಗುಲಿದೆಯೋ ಎಂಬುದು ಪತ್ತೆಯಾಗಬೇಕಿದೆ. ಹೀಗಾಗಿ ಸವಣೂರು ಭಾಗದಲ್ಲಿ ಆತಂಕ ಹೆಚ್ಚಿದೆ.

ಸವಣೂರಿನ ತವರು ಮನೆಗೆ ಆಗಮಿಸಿದ್ದ ಗರ್ಭಿಣಿಗೆ ಕರೊನಾ ಪಾಸಿಟಿವ್ ಇರುವುದು ಭಾನುವಾರ ದೃಢಪಟ್ಟಿದ್ದು, ಗುರುವಾರ ಅವಳ ತವರು ಮನೆಯಾದ ಕುಂಟನಹೊಸಳ್ಳಿಯವರಿಗೂ ಸೋಂಕು ದೃಢಪಟ್ಟಿದೆ. ಹೀಗಾಗಿ ತವರು ಮನೆಗೆ ಹೋಗುವ ಮುಂಚೆಯೇ ಸೋಂಕು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಮಾಡಬೇಕಿದೆ.

ಶಿಗ್ಗಾಂವಿ, ಸವಣೂರ ಹಾಟ್​ಸ್ಪಾಟ್: ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿ, ಸವಣೂರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಅಕ್ಕಪಕ್ಕ ಹಾಗೂ ಖಾದರಬಾಗ್​ನ ಕಂಟೇನ್ಮೆಂಟ್ ಜೋನ್ ಕರೊನಾ ಹಾಟ್​ಸ್ಪಾಟ್ ಆಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 53 ಪಾಸಿಟಿವ್ ಕೇಸ್ ಪತ್ತೆಯಾಗಿದ್ದರಲ್ಲಿ ಶಿಗ್ಗಾಂವಿಯ ದೇಸಾಯಿ ಗಲ್ಲಿಯಲ್ಲಿಯೇ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸೇರಿ 16 ಕೇಸ್ ಪತ್ತೆಯಾಗಿವೆ. ಸವಣೂರಿನ ಕಂಟೇನ್ಮೆಂಟ್ ಜೋನ್​ನಲ್ಲಿ 12 ಪ್ರಕರಣ ದೃಢಪಟ್ಟಿವೆ. ಹೀಗಾಗಿ ಶಿಗ್ಗಾಂವಿ ತಾಲೂಕಿನಲ್ಲಿ ಲಾಕ್​ಡೌನ್ ಘೊಷಿಸಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶಿಗ್ಗಾಂವಿ ತಹಸೀಲ್ದಾರ್ ಸಹ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ. ಸವಣೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ನರ್ಸ್​ಗೂ ಪಾಸಿಟಿವ್ ಬಂದಿರುವುದರಿಂದ ಗುರುವಾರ ಸಂಜೆಯಿಂದ ಸರ್ಕಾರಿ ಆಸ್ಪತ್ರೆಯನ್ನೂ ಸೀಲ್​ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಜೂ. 20ರಿಂದ 25ರವರೆಗೆ 6 ದಿನಗಳ ಅಂತರದಲ್ಲಿ 27 ಪಾಸಿಟಿವ್ ಕೇಸ್ ಕಂಡುಬಂದಿದ್ದು, ಸೋಂಕಿತರ ಸಂಪರ್ಕ ಇಲ್ಲದಿದ್ದವರಲ್ಲೂ ಕರೊನಾ ಕಾಣಿಸಿಕೊಂಡಿರುವುದು ಸಮುದಾಯಕ್ಕೂ ವೈರಸ್ ಹಬ್ಬಿರುವ ಆತಂಕವನ್ನು ಸೃಷ್ಟಿಸಿದೆ.

ಶಿಗ್ಗಾಂವಿ, ಸವಣೂರ, ಹಾನಗಲ್ಲನಲ್ಲಿ ಕೆಲವರಿಗೆ ಸೋಂಕು ಹೇಗೆ ಬಂತು ಎಂಬುದು ಇನ್ನೂ ಪತ್ತೆಯಾಗಿಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಅವರ ಸಂರ್ಪತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಶಿಗ್ಗಾಂವಿಯ ಪಿಗ್ಮಿ ಏಜೆಂಟ್ ಸಕ್ಕರೆ ವ್ಯಾಪಾರಿಯಾಗಿದ್ದು ಸಾಕಷ್ಟು ಕಡೆ ಸಂಚಾರ ಮಾಡಿದ್ದಾರೆ. ರಾಣೆಬೆನ್ನೂರನ ಬಟ್ಟೆ ವ್ಯಾಪಾರಿ, ಶಿವಪುರ ಗ್ರಾಮದ 40 ವರ್ಷದ ಸೋಂಕಿತ ವ್ಯಕ್ತಿಯ ತಾಯಿ ಶಿವಪುರ, ಹಾನಗಲ್ಲ ರಸ್ತೆಯಲ್ಲಿ ಸಣ್ಣ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಕುಂಟನಹೊಳ್ಳಿಯ 55 ವರ್ಷ ಪುರುಷ ಸೋಂಕಿತನು ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ಹೀಗಾಗಿ ಇವರ ಸಂಪರ್ಕಕ್ಕೆ ಬಂದವರು ಸ್ವಯಂ ಪ್ರೇರಿತವಾಗಿ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.| ಕೃಷ್ಣ ಬಾಜಪೈ, ಜಿಲ್ಲಾಧಿಕಾರಿ