ಜಿಲ್ಲೆ

ಆತಂಕ ಸೃಷ್ಟಿಸಿದ ಸೋಂಕಿತ ಕಳ್ಳ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ

ಕರೊನಾ ಸೋಂಕು ತಗುಲಿದ ಕಳ್ಳನೊಬ್ಬ ಆಸ್ಪತ್ರೆಯಿಂದ ಪರಾರಿಯಾಗಿ ಆತಂಕ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ.

ಶಿರಸಿ ಶಹರ ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಬೈಕ್ ಕಳ್ಳತನ ಆರೋಪಿ ಸೋಮವಾರ ಬೆಳಗಿನಜಾವ ಪರಾರಿಯಾಗಿದ್ದ. 11 ಗಂಟೆಯ ಹೊತ್ತಿಗೆ ಕದ್ರಾ ಸಾಕಳಿ ಸಮೀಪ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರವಾರದ ಕ್ರಿಮ್್ಸ ಕರೊನಾ ವಾರ್ಡ್​ನಲ್ಲಿದ್ದ ಇಬ್ಬರ ಮೊಬೈಲ್​ಫೋನ್ ಕಳ್ಳತನ ಮಾಡಿ, ಕಿಟಕಿ ಗಾಜು ಮುರಿದು ಪರಾರಿಯಾದ ಈತ ಹಣಕೋಣವರೆಗೆ ನಡೆದು ಹೋಗಿದ್ದ. ನಂತರ ಮಲ್ಲಾಪುರ ಬಸ್ ಹತ್ತಿ ಪ್ರಯಾಣಿಸಿದ್ದ. ಸುದ್ದಿ ತಿಳಿದ ಕದ್ರಾ ಠಾಣೆಯ ಪೊಲೀಸ್ ಕಾನ್ಸ್​ಟೇಬಲ್ ಮಹೇಶ ಪಾವಸಂಗಿ ಅವರು ತಪಾಸಣೆ ವೇಳೆ ಈತನನನ್ನು ಗುರುತಿಸಿ ಬಂಧಿಸಿದ್ದಾರೆ. ಆರೋಪಿಗೆ ಜಾಮೀನು ಮಂಜೂರಾಗಿದೆ. ಕಾರವಾರ ಕ್ರಿಮ್ಸ್​ನಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿರಿಸಿ ಈತನಿಗೆ ಚಿಕಿತ್ಸೆ ನೀಡಲಾಗುವುದು. ಗುಣವಾದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

ಪಕ್ಕಾ ಕಳ್ಳ: ಮೂಲತಃ ಧಾರವಾಡದವನಾದ ಈತ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ರಾಜ್ಯದ ವಿವಿಧೆಡೆ ಬೈಕ್, ಮೊಬೈಲ್​ಫೋನ್ ಕಳ್ಳತನ ಮಾಡಿದ್ದಾನೆ. ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸರು ಕಳ್ಳತನದ ಆರೋಪದ ಮೇಲೆ ಈತನನ್ನು ಬಂಧಿಸಿದ್ದರು. ಅಲ್ಲಿಂದ ಈತನನ್ನು ಧಾರವಾಡ ಜಿಲ್ಲಾ ಪೊಲೀಸರು ತನಿಖೆಗಾಗಿ ಕರೆತಂದಿದ್ದರು. ಜೂನ್ 24ರಂದು ಶಿರಸಿ ಶಹರ ಠಾಣೆ ಪೊಲೀಸರು ಬೈಕ್ ಕಳ್ಳತನದ ಆರೋಪದ ಮೇಲೆ ಈತನನ್ನು ಬಾಡಿ ವಾರಂಟ್ ಮೇಲೆ ಕರೆತಂದು ವಿಚಾರಣೆ ನಡೆಸಿದ್ದರು. ನಂತರ ಶಿರಸಿ ಸಬ್​ಜೈಲ್​ನಲ್ಲಿ ಇರಿಸಿದ್ದರು.

ನ್ಯಾಯಾಧೀಶರ ಸೂಚನೆಯ ಮೇರೆಗೆ ಈತನನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ರೋಗ ಪತ್ತೆಯಾಗಿದೆ. ಇದರಿಂದ ಶಿರಸಿ ಶಹರ ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. 6 ಪೊಲೀಸ್ ಸಿಬ್ಬಂದಿ, ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ ಹೋಂ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಈಗ ಕಾರವಾರ ಪೊಲೀಸರು ಹಾಗೂ ಬಸ್​ನ ಪ್ರಯಾಣಿಕರಿಗೂ ಕ್ವಾರಂಟೈನ್ ಭೀತಿ ಎದುರಾಗಿದೆ. ಕರೊನಾ ಸೋಂಕಿತನನ್ನು ಹಿಡಿದ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.