ಜಿಲ್ಲೆ

ಸೀಲ್​ಡೌನ್​ನಿಂದ ಮುಖ್ಯ ರಸ್ತೆ ಹೊರಗಿಡಿ

Chikkamagaluru

ಆಲ್ದೂರು: ಆಲ್ದೂರು ಗ್ರಾಪಂ ವ್ಯಾಪ್ತಿಯ ಚಿಕ್ಕಮಾಗರವಳ್ಳಿ ರಸ್ತೆಯಂಚಿನ ಮನೆಯ ಮಹಿಳೆಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದಿದ್ದರಿಂದ ಈ ರಸ್ತೆಯನ್ನು ಸೀಲ್​ಡೌನ್ ಮಾಡಿದ್ದು, ಇದರಿಂದ ಈ ರಸ್ತೆ ಮೂಲಕ ಹಲವು ಗ್ರಾಮಗಳಿಗೆ ಸಂಚರಿಸುವವರಿಗೆ ತೊಂದರೆಯಾಗಿದೆ. ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಆಲ್ದೂರಿನ ಕೆಳ ಬಸ್ ನಿಲ್ದಾಣದಿಂದ ಚಿಕ್ಕಮಾಗರವಳ್ಳಿ ಕಡೆ ಹೋಗುವ ರಸ್ತೆಗೆ ಸಂಪೂರ್ಣ ಬ್ಯಾರಿಕೇಡ್ ಹಾಕಲಾಗಿದೆ. ಇದರಿಂದ ಚಿಕ್ಕಮಾಗರವಳ್ಳಿ, ದೊಡ್ಡಮಾಗರವಳ್ಳಿ, ಹಳಿಯೂರು, ಹೆಡದಾಳ್, ಮಾವಿನಗುಣಿ, ಹಳ್ಳಿ ಸೇರಿ ಹಲವು ಗ್ರಾಮಸ್ಥರು ಆಲ್ದೂರಿಗೆ ಬರಲು 7-8 ಕಿಮೀ ಸುತ್ತಿ ಬರುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಆಟೋದಲ್ಲಿ ಬರುವವರು ದುಪ್ಪಟ್ಟು ಹಣ ನೀಡಿ ಪಟ್ಟಣಕ್ಕೆ ಬರುವಂತಾಗಿದೆ. ಪಾಸಿಟಿವ್ ಬಂದ ವ್ಯಕ್ತಿ ಮನೆ ಈ ರಸ್ತೆಯಿಂದ 70-ರಿಂದ 80 ಅಡಿ ದೂರ ಇರುವುದರಿಂದ ಆ ಮನೆಯನ್ನು ಮಾತ್ರ ಸೀಲ್​ಡೌನ್ ಮಾಡಲಿ. ಸಾರ್ವಜನಿಕರ ಹಿತದೃಷ್ಟಿಯಿಂದ ಗ್ರಾಮಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.