ಮಹಾಲಿಂಗಪುರ: ಪಟ್ಟಣವನ್ನು ತಾಲೂಕು ಕೇಂದ್ರವಾಗಿಸುವುದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಪಟ್ಟಣದ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಮಹಾಲಿಂಗಪುರ ತಾಲೂಕು ಹೋರಾಟ ಸಮಿತಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ನಮ್ಮ ಬೇಡಿಕೆ ಆಲಿಸಿ, ನಮ್ಮ ಪರ ನಿಲುವು ವ್ಯಕ್ತಪಡಿಸಿರುವುದು ಸಂತಸವಾಗಿದೆ. ಶೀಘ್ರದಲ್ಲೇ ಪಟ್ಟಣದಲ್ಲಿ ಉಸ್ತುವಾರಿ ಸಚಿವರು ಹಾಗೂ ಮುಖಂಡರ ಸಭೆ ನಡೆಸಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕಳುಹಿಸಲಾಗುವುದು ಎಂದರು.
ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಂಗಪ್ಪ ಹಲ್ಲಿ ಹಾಗೂ ಮುಖಂಡರಾದ ಗಂಗಾಧರ ಮೇಟಿ ಮಾತನಾಡಿ, ಪುರಸಭೆಯ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಕಂದಾಯ ಸಚಿವರಿಗೆ ಬೇಡಿಕೆ ಸಲ್ಲಿಸಿದ್ದೇವೆ. ನಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಂದ ಕಂದಾಯ ಇಲಾಖೆಗೆ ಹಾಗೂ ಕಂದಾಯ ಇಲಾಖೆಯಿಂದ ಹಣಕಾಸು ಇಲಾಖೆಗೆ ಕಳಿಸಲಾಗಿದೆ. ಸರ್ಕಾರದ ಮುಂದೆ ನೂತನ ತಾಲೂಕಿಗಾಗಿ ಹಲವು ಪ್ರಸ್ತಾವನೆಗಳಿವೆ. 33 ನೂತನ ಹೋಬಳಿ, 5 ಹೊಸ ತಾಲೂಕು ಘೋಷಣೆಯ ಸಮಯದಲ್ಲಿ ನಮ್ಮ ಮಹಾಲಿಂಗಪುರ ತಾಲೂಕು ಬೇಡಿಕೆಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದ್ದೇವೆ ಎಂದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ತಾಲೂಕು ಹೋರಾಟ ಸಮಿತಿಯ ಧರೆಪ್ಪ ಸಾಂಗಲೀಕರ, ಡಾ.ಎ.ಆರ್.ಬೆಳಗಲಿ, ಮಲ್ಲಪ್ಪ ಸಿಂಗಾಡಿ, ಮಹಾದೇವ ಮಾರಾಪೂರ, ಮಹಾಲಿಂಗಪ್ಪ ಸನದಿ, ವಿರೇಶ ಆಸಂಗಿ, ನಿಂಗಪ್ಪ ಬಾಳಿಕಾಯಿ, ಎಸ್.ಎಂ.ಪಾಟೀಲ, ಅಶೋಕ ಅಂಗಡಿ, ರಫೀಕ ಮಾಲದಾರ, ವಿಠ್ಠಲ ಢವಳೇಶ್ವರ, ಈಶ್ವರ ಮೂರಗೋಡ, ಚನ್ನು ದೇಸಾಯಿ, ಬಸವರಾಜ ಚನ್ನಾಳ, ಕರೆಪ್ಪ ಮೇಟಿ, ಸಿದ್ದು ಶಿರೋಳ, ನ್ಯಾಯವಾದಿಗಳಾದ ಅನೀಲ್ ಓಸ್ವಾಲ್, ಎಂ.ಕೆ. ಸಂಗನ್ನವರ ಮತ್ತಿತರರಿದ್ದರು.