ಲಾವಣ್ಯ ಬೈಂದೂರು 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ -2025ರ ಐದು ದಿನಗಳ ರಂಗೋತ್ಸವವನ್ನು ತೆರಿಗೆ ಸಲಹೆಗಾರ ಜತೀಂದ್ರ ಮರವಂತೆ ಉದ್ಘಾಟಿಸಿದರು.  
ಜಿಲ್ಲೆ

ನಾಟಕದ ಅನುಭವದಿಂದ ಧನಾತ್ಮಕವಾಗಿ ಬದಲಾವಣೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಕಾಲತೀತ ವಿಷಯ ಕಥೆಗಳು, ನಾಟಕದ ಮೂಲಕ ನೋಡುವಾಗ ದಕ್ಕುವ ಅನುಭವ ನಮ್ಮೊಳಗೆ ಸಂಚಲನ ಸೃಷ್ಟಿಸುತ್ತದೆ. ಆ ಮೂಲಕ ಪ್ರತಿಯೊಬ್ಬ ವ್ಯಕ್ತಿ ಧನಾತ್ಮಕವಾಗಿ ಬದಲಾವಣೆಯಾಗಲು ಸಾಧ್ಯ ಎಂದು ತೆರಿಗೆ ಸಲಹೆಗಾರ ಜತೀಂದ್ರ ಮರವಂತೆ ಹೇಳಿದರು.

ಶಾರದಾ ವೇದಿಕೆಯಲ್ಲಿ ಲಾವಣ್ಯ ಬೈಂದೂರು 48ನೇ ವಾರ್ಷಿಕೋತ್ಸವ ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ರಂಗಪಂಚಮಿ -2025ರ ಐದು ದಿನಗಳ ರಂಗೋತ್ಸವ ಉದ್ಘಾಟಿಸಿ ಮಾತನಾಡಿದರು.

ನಾಟಕಗಳು ನಮ್ಮೊಳಗಿನ ವಿಷಯ ಅರ್ಥಪೂರ್ಣವಾಗಿ ಸಮಕಾಲಿನ ಅಧ್ಯಯನದ ಮೂಲಕ ಜನರಿಗೆ ತಲುಪಿಸುವ ವೇದಿಕೆ. ಸಮಾಜದ ನಡುವಿನ ವಿಚಾರ ಕಾಲದ ಹಾಗೂ ವ್ಯವಸ್ಥೆ ಬದಲಾವಣೆಗೆ ಪೂರಕವಾಗಿ ರೂಪಿಸಿಕೊಳ್ಳುವ ಮತ್ತು ಎಚ್ಚರಿಸುವ ಮಾಧ್ಯಮ. ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ 48 ವರ್ಷಗಳ ಅವಧಿಯಲ್ಲಿ ಲಾವಣ್ಯ ರಂಗ ಕ್ರಾಂತಿ ಉಂಟು ಮಾಡುವ ಮೂಲಕ ಮುಂದಿನ ತಲೆಮಾರಿನ ಯುವಕಲಾವಿದರನ್ನು ಸೃಷ್ಟಿಸಿದ ಬೈಂದೂರಿನ ಹೆಮ್ಮೆಯ ಸಂಸ್ಥೆ ಎಂದರು.

ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದೆ ಚೇತನ್ ಪ್ರಸಾದ್ ಬೆಂಗಳೂರು, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ ಅಧ್ಯಕ್ಷೆ ವಿದ್ಯಾ ಅಶೋಕ ಶೇಟ್ ಉಪಸ್ಥಿತರಿದ್ದರು. ಲಾವಣ್ಯ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆ ವ್ಯವಸ್ಥಾಪಕ ಗಣಪತಿ ಎಸ್. ಸ್ವಾಗತಿಸಿದರು. ಸುಬ್ರಹ್ಮಣ್ಯ ಜಿ. ಮತ್ತು ಚೈತ್ರಾ ಯಡ್ತರೆ ನಿರೂಪಿಸಿದರು. ಮಂಜುನಾಥ ಶಿರೂರು ವಂದಿಸಿದರು. ನಂತರ ಲಾವಣ್ಯ ಕಲಾವಿದರಿಂದ ಆಲಿಬಾಬಾ ಮತ್ತು ನಲ್ವತ್ತು ಕಳ್ಳರು ನಾಟಕ ಪ್ರದರ್ಶನಗೊಂಡಿತು.

ಅಭಿನಂದನೆ, ಗೌರವಾರ್ಪಣೆ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಅವರಿಗೆ ಅಭಿನಂದನೆ ಹಾಗೂ ಹಿರಿಯ ಕಲಾವಿದ ಗೋವಿಂದ ಎಂ. ಮತ್ತು ಸಂಗೀತ ಕಲಾವಿದ ಹಾಲಾಡಿ ಕೃಷ್ಣ ಕಾಮತ್ ಅವರನ್ನು ಸನ್ಮಾನಿಸಲಾಯಿತು.