ಮಂಡ್ಯ: ಒಂದೆಡೆ ಭಾರತ ಅಭಿವೃದ್ದಿ ಹೊಂದುತ್ತಿದ್ದರೂ ಮತ್ತೊಂದೆಡೆ ಅಪೌಷ್ಟಿಕತೆಯ ಮಕ್ಕಳನ್ನು ಕಾಣುತ್ತಿದ್ದೇವೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.
ನಗರದ ಗುತ್ತಲು ಬಡಾವಣೆಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ, ತೋಟಗಾರಿಕೆ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 2023ನೇ ಸಾಲಿನ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶ, ರಾಜ್ಯ, ಮಂಡ್ಯ ಜಿಲ್ಲೆಯು ಅಭಿವೃದ್ದಿ ಹೊಂದುತ್ತಿದ್ದರು ಮಕ್ಕಳಲ್ಲಿ ಅಪೌಷ್ಟಿಕತೆ ಕಾಡುತ್ತಿದೆ. ಇಂತಹ ಮಕ್ಕಳನ್ನು ನಾವು ನೋಡುತ್ತಿದ್ದೇವೆ. ತರಕಾರಿ, ಸೊಪ್ಪು, ಕಾಳುಗಳಿಂದ ಮಾಡಿಕೊಡುವ ತಿನಿಸನ್ನು ಮಕ್ಕಳಿಗೆ ಕೊಡುವುದರಿಂದ ಅಪೌಷ್ಟಿಕತೆಯಿಂದ ದೂರಾಗಿಸಬಹುದು. ಮಕ್ಕಳಿಗೆ ಸಮತೋಲನ ಆಹಾರ ಸಿಗದೇ ಹೋದರೆ ಬೌದ್ಧಿಕ ಮತ್ತು ಮಾನಸಿಕವಾಗಿ ಬೆಳೆವಣಿಗೆಯ ಶಕ್ತಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸುಮಾರು 98 ಮಕ್ಕಳು ಅತಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಸೌಲಭ್ಯ ಒದಗಿಸಿದೆ. ಮಿಮ್ಸ್‌ನಲ್ಲಿ ಸುಮಾರು 20 ಹಾಸಿಗೆ ಕಾಯ್ದಿರಿಸಲಾಗಿದ್ದು, ಸೇವೆ ನೀಡಲು ಸಿದ್ದವಿದ್ದೇವೆ. ಪಾಲಕರಿಗೆ ದಿನಕ್ಕೆ 300 ರೂ ಗೌರವ ದಿನ ನೀಡಲಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಮಾತನಾಡಿ, ಇಂದಿನ ಜನತೆ ಆಧುನೀಕತೆಯ ಹೆಸರಲ್ಲಿ ಪೂರ್ವಿಕರ ಆಹಾರ ಪದ್ಧತಿ ಬಿಟ್ಟು ಫಾಸ್ಟ್‌ಫುಡ್‌ಗೆ ಮರುಳಾಗುತ್ತಿದ್ದಾರೆ. ಅಪೌಷ್ಟಿಕತೆ ಹೆಚ್ಚಾಗುತ್ತಿದ್ದರೂ ಅವರಿಗೆ ರುಚಿ ನೀಡುವ ಅನಾರೋಗ್ಯಕರ ಆಹಾರವೇ ಬೇಕಾಗಿದೆ ಎಂದರು.
ಜಿಲ್ಲೆ ಬಾಲ್ಯ ವಿವಾಹದಲ್ಲಿ ರಾಜ್ಯಕ್ಕೆ 4 ಸ್ಥಾನ ಪಡೆದಿದೆ. ಎಷ್ಟೇ ವಿದ್ಯಾವಂತರಾದರೂ ಹಾಗೂ ಜಿಲ್ಲೆ ಅಭಿವೃದ್ದಿ ಹೊಂದುತ್ತಿದ್ದರೂ ಅಪ್ರಾಪ್ತೆಯರಿಗೆ ವಿವಾಹ ಮಾಡುತ್ತಿದ್ದಾರೆ. 16-18 ವರ್ಷಕ್ಕೆ ಮದುವೆ ಮಾಡಿದಾಗ ಇಂತವರಿಗೆ ಅಪೌಷ್ಟಿಕತೆ, ಬುದ್ದಿಮಾಂದ್ಯತೆ ಮಕ್ಕಳು ಜನಿಸುತ್ತವೆ ಎಂದು ವಿಷಾದಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ನಗರಸಭಾ ಸದಸ್ಯರಾದ ಶ್ರೀನಿವಾಸ್, ವಿಶಾಲಾಕ್ಷಿ, ಸೌಭಾಗ್ಯ, ಶ್ರೀಧರ್, ಲಲಿತಾ, ಮಾಜಿ ಸದಸ್ಯ ಅನಿಲ್‌ಕುಮಾರ್, ಸೊಸೈಟಿ ಅಧ್ಯಕ್ಷ ಮಂಜುನಾಥ್, ಆಯುಷ್ ವೈದ್ಯರಾದ ಡಾ.ಸುಹಾಸಿನಿ, ಡಾ.ಅಂಬಿಕಾ, ಡಾ.ರಜಿನಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ರಾಜೇಶ್, ಚಂದ್ರಶೇಖರ್, ಧರಣಿಕುಮಾರ್, ಅಂಬಿಕಾ, ಕುಮಾರಸ್ವಾಮಿ, ನಟರಾಜ್, ರಮ್ಯಾ, ಕಲ್ಪನಾ ಇತರರಿದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಪೌಷ್ಟಿಕಾಹಾರ ಸೇವನೆ ಕಾರ್ಯ ನಡೆಯಿತು.