ದೇವದುರ್ಗ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಬಿಸಿಯೂಟ ಉಣಬಡಿಸಬೇಕು ಎಂದು ತಾಪಂ ಇಒ ಬಸವರಾಜ ಹಟ್ಟಿ ಹೇಳಿದರು.
ಪ್ರಧಾನಮಂತ್ರಿ ಪೋಷಣ್ ಅಭಿಯಾನದಡಿ ಜಾಲಹಳ್ಳಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಮುಖ್ಯಶಿಕ್ಷಕರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಅಕ್ಷರಭ್ಯಾಸ ಎನ್ನುವುದು ಒತ್ತಡದಿಂದ ತುರುಕುವ ಸಾಧನವಲ್ಲ. ನಲಿಯುತ್ತ, ಆಡುತ್ತಾ ಕಲಿಯಬೇಕಾದ ವಿಧಾನ. ಮಕ್ಕಳಿಗೆ ಮನೋರಂಜನಾತ್ಮಕ ಶಿಕ್ಷಣ ನೀಡಬೇಕಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳ ಕಲಿಕೆಗೆ ಸರ್ಕಾರ ಅಕ್ಷರ ದಾಸೋಹ ಯೋಜನೆ, ನಲಿಕಲಿ, ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯಂಥ ಹಲವು ಯೋಜನೆ ರೂಪಿಸಿದ್ದು, ಅಧಿಕಾರಿಗಳು ಸಮರ್ಪಕವಾಗಿ ಜಾರಿಗೊಳಿಸಬೇಕು. ಆ ಮೂಲಕ ಮಕ್ಕಳಲ್ಲಿ ಕಾಡುವಂಥ ಹಸಿವು, ಅಪೌಷ್ಟಿಕತೆ ಹೋಗಲಾಡಿಸಲು ಶ್ರಮಿಸಬೇಕು. ಮಕ್ಕಳ ಕಲಿಕಾಮಟ್ಟ ಹೆಚ್ಚಿಸಬೇಕು ಎಂದರು.
ಪಿಎಂ ಬಿಸಿಯೂಟ ಯೋಜನೆ ಅಧಿಕಾರಿ ಕನಾನ್ ಪ್ರಭು ಮಾತನಾಡಿ, ಬಿಸಿಯೂಟ ಸ್ವಚ್ಛ, ರುಚಿಕರವಾಗಿ ತಯಾರಿಸಬೇಕು. ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಮೊಟ್ಟೆ ಕೊಡಬೇಕು. ಪೋಷಣ ಅಭಿಯಾನ ಸಮರ್ಪಕವಾಗಿ ಜಾರಿಮಾಡಿ, ಮಕ್ಕಳಿಗೆ ಸದೃಢ ದೇಹ ಹಾಗೂ ಮನಸ್ಸು ಇರುವಂತೆ ನೋಡಿಕೊಳ್ಳಬೇಕು ಎಂದರು.
ಬಿಇಒ ಮಲ್ಲಿಕಾರ್ಜುನ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಕಟ್ಟಿಮನಿ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಶಿಕ್ಷಣ ಸಂಯೋಜಕ ವೆಂಕಟೇಶ ನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನೇಮಣ್ಣ, ಸಾಬಣ್ಣ ವಗ್ಗರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ಮಂಜುಳಾ ಇತರರಿದ್ದರು.