ಜಿಲ್ಲೆ

ಸಾಗರಮಾಲಾದ ಬಂದರು ವಿಸ್ತರಣೆ ಯೋಜನೆ ಅಂಕೋಲಾಕ್ಕೆ ಸ್ಥಳಾಂತರ..?

ಕಾರವಾರ:ಉತ್ತರ ಕನ್ನಡ ಕರಾವಳಿಯಲ್ಲಿ ವಾಣಿಜ್ಯ ಬಂದರುಗಳ ನಿರ್ಮಾಣ ಹಾಗೂ ವಿಸ್ತರಣೆಯನ್ನು ವಿರೋಧಿಸಿದ್ದ ಮಂಕಾಳ ವೈದ್ಯ ಇಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿದ್ದಾರೆ.

ಈಗ ಬಂದರುಗಳ ಭವಿಷ್ಯ ಏನಾಗಲಿದೆ ಎಂಬ ಅಚ್ಚರಿ ಮೂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊನ್ನಾವರ ಕಾಸರಕೋಡಿನಲ್ಲಿ ಖಾಸಗಿ ಬಂದರು ನಿರ್ಮಾಣ ಹಾಗೂ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆ ಯೋಜನೆಗಳು ಚುರುಕುಗೊಂಡಿದ್ದವು.

ಆದರೆ, ಮೀನುಗಾರರು ಯೋಜನೆಗಳ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ಆಗಿನ ಬಿಜೆಪಿ ಸರ್ಕಾರ ಮೀನುಗಾರರ ಪ್ರತಿರೋಧವನ್ನು ಲೆಕ್ಕಿಸದೇ ಮುಂದುವರಿಯಿತು ಎಂಬ ಬೇಸರದಿಂದ ಮೀನುಗಾರರು ಸದ್ಯ ಕಾನೂನು ಹೋರಾಟ ನಡೆಸಿದ್ದಾರೆ.

ಟೊಂಕ ಮೀನುಗಾರರಲ್ಲಿ ಭರವಸೆ:
ಆಗ ನಡೆದ ಬಂದರು ವಿರೋಧಿ ಹೋರಾಟಗಳಿಗೆ ಮಂಕಾಳ ವೈದ್ಯ ಬೆಂಬಲ ಸೂಚಿಸಿದ್ದರು. ಸ್ವತಃ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದರು. ಈಗ ಸ್ವತಃ ಮಂಕಾಳ ವೈದ್ಯ ಅವರೇ ಸಚಿವರಾಗಿರುವುದರಿಂದ ಮೀನುಗಾರರಲ್ಲಿ ತಮ್ಮ ಹೋರಾಟಕ್ಕೆ ಫಲ ಸಿಗುವ ಭರವಸೆ ಮೂಡಿದೆ.

"ಮಂಕಾಳ ವೈದ್ಯ ಅವರು ಸಚಿವರಾದ ನಂತರ ಡಾ.ಪ್ರಕಾಶ ಮೇಸ್ತ, ಗಣಪತಿ ತಾಂಡೇಲ, ರಾಜು ತಾಂಡೇಲ ಹಾಗೂ ಇತರರು ನಿಯೋಗ ತೆರಳಿ ಅವರನ್ನು ಭೇಟಿಯಾಗಿದ್ದೇವೆ. ಸಮಸ್ಯೆ, ನಮ್ಮ ಬೇಡಿಕೆ ಹೇಳಿಕೊಂಡಿದ್ದೇವೆ. ಸಚಿವರು ಸಮಸ್ಯೆ ಬಗೆಹರಿಸಿ ಮೀನುಗಾರರ, ಸ್ಥಳೀಯರ ಪರ ನಿಲ್ಲುವ ಭರವಸೆ ನೀಡಿದ್ದಾರೆ.' ಎಂಬುದು ಟೊಂಕದ ಮೀನುಗಾರರ ಮುಖಂಡ ರಾಜು ತಾಂಡೇಲ ಹೇಳುತ್ತಾರೆ.

ಸಾಗರಮಾಲಾ ಅಂಕೋಲಾಕ್ಕೆ..?

2019-20 ರಲ್ಲಿ ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ನಡೆದ ಹೋರಾಟಗಳಲ್ಲಿ ಸತೀಶ ಸೈಲ್ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು. ಈಗ ಆವರೂ ಶಾಸಕರಾಗಿ ಅಧಿಕಾರಕ್ಕೆ ಬಂದಿದ್ದಾರೆ.

"ಸತೀಶ ಸೈಲ್ ಹಾಗೂ ಮಂಕಾಳ ವೈದ್ಯ ಇಬ್ಬರೂ ಸೇರಿ ಸಾಗರ ಮಾಲಾ ಯೋಜನೆಯ ವಿರುದ್ಧ ಮೀನುಗಾರರ ಹೋರಾಟಕ್ಕೆ ಬೆಂಬಲ ನೀಡಿ ಅದನ್ನು ತಡೆಯುತ್ತಾರೆ ಎಂಬ ವಿಶ್ವಾಸ ನಮಗಿದೆ" ಎನ್ನುತ್ತಾರೆ. ಕಾರವಾರದ ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ.

ಈ ನಡುವೆ ಕಳೆದವಾರ ಕಾರವಾರದಲ್ಲಿ ಸಭೆ ನಡೆಸಿದ್ದ ಮಂಕಾಳ ವೈದ್ಯ ಅವರು, ಕಾರವಾರ ಬಂದರು ವಿಸ್ತರಣೆ ಯೋಜನೆಯನ್ನು ಅಂಕೋಲಾಕ್ಕೆ ಸ್ಥಳಾಂತರಿಸುವ ಬಗ್ಗೆ ಮಾತನಾಡಿದ್ದಾರೆ.

ಕಾರವಾರ ವಾಣಿಜ್ಯ ಬಂದರು ವಿಸ್ತಣೆಗೆ ಮಂಜೂರಾದ ಹಣ ಬಳಕೆಯಾಗದೇ ವಾಪಸಾಗುವುದು ಬೇಡ. ಅದನ್ನು ಅಂಕೋಲಾಕ್ಕೆ ಸ್ಥಳಾಂತರ ಮಾಡಲು ಅವಕಾಶವಿರುವ ಬಗ್ಗೆ ಪರಿಶೀಲನೆ ನಡೆಸಿ ಎಂದು ಬಂದರು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ. ಬಂದರು ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದ್ದು, ಬಂದರು ವಿಸ್ತರಣೆ ಭವಿಷ್ಯ ಏನಾಗಲಿದೆ ಕಾದು ನೋಡಬೇಕಿದೆ.
ಇನ್ನೂ ಕೆಲ ಬಂದರು
ಸಾಗರ ಮಾಲಾ ಯೋಜನೆಯಲ್ಲಿ ಕಾರವಾರ ಮಾತ್ರವಲ್ಲ ಇನ್ನೂ ಕೆಲವು ಬಂದರು ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಖಾಸಗಿ ಸಹಭಾಗಿತ್ವದಲ್ಲಿ ಅಂಕೋಲಾದ ಕೇಣಿ ಕೇಣಿಯಲ್ಲಿ ಬಂದರು ನಿರ್ಮಾಣದ ಬಗ್ಗೆ ಯೋಜನೆ ರೂಪುಗೊಂಡಿದೆ. ಬೇಲೆಕೇರಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಬಗ್ಗೆಯೂ ಚರ್ಚೆಯಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರದ ನಿರ್ಧಾರಗಳ ಬಗ್ಗೆ ಈಗ ಕುತೂಹಲವಿದೆ.

ನ್ಯಾಯಾಲಯದಲ್ಲಿ

  • *ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಯೋಜನೆಗೆ 2021 ರಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ವಿಚಾರಣೆ ಇನ್ನಷ್ಟೇ ಪ್ರಾರಂಭವಾಗಬೇಕಿದೆ.
  • *ಕಾರವಾರ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಗೆ ಎನ್‌ಜಿಟಿ ತಡೆ ನೀಡಿದ್ದು, ಅದೂ ವಿಚಾರಣೆ ಹಂತದಲ್ಲಿದೆ.
  • *ಹೊನ್ನಾವರ ಕಾಸರಕೋಡು ಬಂದರು ವಿಸ್ತರಣೆ, ರಸ್ತೆ ಸಂಪರ್ಕ ಕಲ್ಪಿಸುವ ಸಂಬAಧ ಸ್ಥಳೀಯ ಮೀನುಗಾರರು ಹೂಡಿದ್ದ ದಾವೆ ಎನ್‌ಜಿಟಿ ವಿಚಾರಣೆ ನಡೆಸಿದೆ.

ಹೆಜ್ಜೆ ಗುರುತು

  • ಹೊನ್ನಾವರದಲ್ಲಿ ಖಾಸಗಿ ಬಂದರು ನಿರ್ಮಾಣ ಸಂಬಂಧ ಆಗಿನ ಯಡಿಯೂರಪ್ಪ ಸರ್ಕಾರ ಹಾಗೂ ಹಾಗೂ ಹೊನ್ನಾವರ ಪೋರ್ಟ್ ಪ್ರೆÊ.ಲಿನಿಂದ 2010 ರಲ್ಲಿ ಒಡಂಬಡಿಕೆಯಾಗಿದ್ದು, ಸರ್ಕಾರ ಖಾಸಗಿ ಕಂಪನಿಗೆ 40 ಸಾವಿರ ಚದರ ಮೀ ಭೂಮಿಯನ್ನು ನೀಡಿದೆ.
  • ಕಾರವಾರ ಕಡಲ ತೀರದಲ್ಲಿ 1,160 ಮೀಟರ್ ಅಲೆ ತಡೆ ಗೋಡೆ ಹಾಗೂ 880 ಮೀಟರ್ ಜಟ್ಟಿ ವಿಸ್ತರಣೆ ಯೋಜನೆ ಕೇಂದ್ರ ಸರ್ಕಾರದ ಸಾಗರ ಮಾಲಾ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ನಡೆದಿದ್ದು, 2017 ರಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.
ನಾವು ಜನಪರವಾಗಿದ್ದೇವೆ. ಸ್ಥಳೀಯರಿಗೆ ಬೇಡ ಎಂದರೆ ನಾವು ಅಂಥ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಜನರ ಜತೆ ಚರ್ಚಿಸಿ, ಸಾಧಕ ಬಾಧಕ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.ಮಂಕಾಳ ಎಸ್.ವೈದ್ಯಜಿಲ್ಲಾ ಉಸ್ತುವಾರಿ ಸಚಿವ