ಜಿಲ್ಲೆ

ಪೊರಾಡ್- ಹೈಸೊಡ್ಲೂರು ಸಂಪರ್ಕ ರಸ್ತೆ ಭೂಕುಸಿತದಿಂದ ಕಡಿತವಾಗುವ ಅಪಾಯ

ಶ್ರೀಮಂಗಲ: ಪೊನ್ನಂಪೇಟೆ ಮತ್ತು ಗೋಣಿಕೊಪ್ಪದಿಂದ ಬಿರುನಾಣಿಗೆ ಸುಮಾರು ೧೦- ೧೨ ಕಿ.ಮೀ. ಅಂತರ ಕಡಿಮೆಯಾಗುವ ಹಾಗೂ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನಕ್ಕೆ ಸಮೀಪದ ಮಾರ್ಗ(ಪೊರಾಡ್- ಹೈಸೊಡ್ಲೂರ್ ಮೂಲಕ) ರಸ್ತೆ ತೀವ್ರ ಮಳೆಯಿಂದ ಇಲ್ಲಿನ ಕಕ್ಕಟ್ಟ್ ಪೊಳೆ ನದಿ ಸೇತುವೆ ಸಮೀಪ ಭೂಕುಸಿತದಿಂದ ಕಡಿತವಾಗುವ ಅಪಾಯ ಉಂಟಾಗಿದೆ.

ತೋಡಿನ ನೀರು ಹರಿದು ಸುಮಾರು ೩೦ ಅಡಿ ಅಳದಿಂದ ನದಿಯ ಮಟ್ಟದಲ್ಲಿ ಮಣ್ಣು ಕೊಚ್ಚಿಹೋಗಿ ಮಣ್ಣು ಜಾರುತ್ತಿದೆ.ಕಳೆದ ೩-೪ ವರ್ಷಗಳಿಂದ ಇಲ್ಲಿ ಮಣ್ಣು ಜಾರಿ ಅಪಾಯ ಉಂಟಾಗಿದ್ದರು ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸದ ಹಿನ್ನಲೆ ಇದೀಗ ಮುಖ್ಯ ರಸ್ತೆಯೇ ಕಡಿತವಾಗುವ ಅಪಾಯ ಉಂಟಾಗಿದೆ.

ಭೂಕುಸಿತದಿಂದ ೩೦ ಅಡಿಯಷ್ಟು ಕಂದಕ ಉಂಟಾಗಿದ್ದು ೨೦ ಅಡಿ ಅಂತರದಲ್ಲಿ ಮಾಜಿ ಸೈನಿಕ ಕುಟುಂಬದ ಮನೆ ಇದ್ದು ಒಂದು ಕಡೆ ಮನೆ ಇನ್ನೊಂದು ಕಡೆ ರಸ್ತೆಗೆ ಅಪಾಯ ಉಂಟಾಗಿದೆ.ಇದೇ ರೀತಿ ಇನ್ನೂ ಹಲವು ದಿನ ಮಳೆ ಸುರಿದರೆ ಈ ಮುಖ್ಯ ರಸ್ತೆ ಕುಸಿದು ಸಂಪರ್ಕ ಕಡಿತ ವಾಗುವ ಅಪಾಯ ಉಂಟಾಗಿದೆ.

ಇತ್ತ ಸಮೀಪದಲ್ಲಿರುವ ಮಾಜಿ ಸೈನಿಕ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು,ಕೇವಲ ೨೦ ಅಡಿಯಲ್ಲಿ ಭೂಕುಸಿತದಿಂದ ಸುಮಾರು ೩೦ ಅಡಿ ಆಳದ ಕಂದಕ ಉಂಟಾಗಿದ್ದು,ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮನೆಯಲ್ಲಿ ಇದ್ದಾರೆ.

ಇತ್ತ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಮಳೆ ಹಾನಿ ತುರ್ತು ಪರಿಹಾರ ತಂಡ ಇಲ್ಲಿ ಗೆ ಭೇಟಿ ನೀಡಿ, ಮತ್ತಷ್ಟು ಅಪಾಯವಾಗದಂತೆ ತುರ್ತಾಗಿ ಮತ್ತು ಮುಂದೆ ಶಾಶ್ವತವಾಗಿ ಕುಸಿಯದಂತೆ ಸೂಕ್ತ ಯೋಜನೆ ರೂಪಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ.