ಮೈಸೂರು: ಸತತ 14 ಗಂಟೆ 2 ನಿಮಿಷಗಳ ಕಾಲ ಸ್ವಾಮಿ ವಿವೇಕಾನಂದರ ಬಗ್ಗೆ ಮಾತನಾಡಿ 12ನೇ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿದ ನಗರದ ಪೂರ್ಣ ಚೇತನ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಚ್.ಎಸ್.ಮಹೇಶ್‌ಕುಮಾರ್ ಅವರನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದ ಸ್ವಾಮೀಜಿ ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಮಹಾ ವಿಶ್ವ ಚೈತನ್ಯ. ಅವರು ಇಡೀ ಜಗತ್ತಿಗೆ ಮಾರ್ಗದರ್ಶಕರು. ಅವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ವಿಶ್ವ ಸಹೋದರತ್ವ, ವಿಶ್ವ ಶಾಂತಿಯ ಹರಿಕಾರ. ಹಾಗಾಗಿ ಬಾಲಕ ಸತತ 14 ಗಂಟೆ 2 ನಿಮಿಷಗಳ ಕಾಲ ಸ್ವಾಮಿ ವಿವೇಕಾನಂದರ ಹುಟ್ಟು, ಬೆಳವಣಿಗೆ, ಜೀವನಗಾಥೆ, ಸಾಧನೆ ಮತ್ತು ವಿಶ್ವಕ್ಕೆ ಅವರ ಕೊಡುಗೆಗಳ ಬಗ್ಗೆ ಮಾತನಾಡಿರುವುದು ಹೆಮ್ಮೆಯ ಸಂಗತಿ ಎಂದರು.
ವೈಯಕ್ತಿಕ ವಿಭಾಗದಲ್ಲಿ ಎಲೈಟ್ ವರ್ಲ್ಡ್ ರೆಕಾರ್ಡ್ ಅಕಾಡೆಮಿ, ಏಷ್ಯನ್ ಅಕಾಡೆಮಿ, ಇಂಡಿಯ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾನೆ. ಮೈಸೂರು ಜಿಲ್ಲೆಯ ಬನ್ನೂರು ಸಮೀಪದ ಹನುಮನಾಳು ಎಂಬ ಪುಟ್ಟ ಗ್ರಾಮದ ಸೋಮಶೇಖರ ಮತ್ತು ತಾಯಮ್ಮ ರೈತ ದಂಪತಿಯ ಪುತ್ರನಾಗಿ ಕಿರಿಯ ವಯಸ್ಸಿನಲ್ಲಿ ಸಾಧನೆ ಮಾಡಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೂರ್ಣ ಚೇತನ ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ದರ್ಶನ್ ರಾಜ್ ಮಾತನಾಡಿ, ಶ್ರೀರಾಮಕೃಷ್ಣ ಪರಮಹಂಸ- ಮಾತೆ ಶಾರದಾ ದೇವಿ-ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ವಿದ್ಯಾರ್ಥಿ ಜೀವನದಿಂದಲೇ ಮಕ್ಕಳು ಅಳವಡಿಸಿಕೊಳ್ಳಬೇಕು. ಅದು ಅವರ ಬದುಕಿಗೆ ಒಂದು ಧನಾತ್ಮಕ ಪ್ರೇರಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಾತ್ಮದ ಸ್ಪರ್ಶವಿಲ್ಲದ ಆಧುನಿಕ ಶಿಕ್ಷಣ, ಜೀವನ, ಪರಿಮಳ ರಹಿತ ಹೂವಿನಂತೆ, ಅದು ಯಾವುದಕ್ಕೂ ಪ್ರಯೋಜನಕ್ಕೆ ಬಾರದು. ಇದನ್ನು ನಮ್ಮ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.