ನಾಯಕನಹಟ್ಟಿ: ದುರಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತುರುವನೂರು ಗ್ರಾಮದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದು ವಾರ ಒಂದು ಹೋಬಳಿಯಲ್ಲಿ ಜನಸ್ಪಂದನ ಏರ್ಪಡಿಸಲಾಗುವುದು.
ಹೀಗಾದಾಗ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗಲಿದೆ ಎಂದರು.
ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕುಸಿದಿದೆ. ಹೀಗಾಗಿ ಕೃಷಿ ಅಧಿಕಾರಿಗಳು ರೈತರಿಗೆ ವಿಮೆ ಹಾಗೂ ಪರಿಹಾರ ನೀಡುವುದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು.
ಎನ್‌ಡಿಆರ್‌ಎಫ್ ಮಾರ್ಗಸೂಚಿಯನ್ನು ಗಮನದಲ್ಲಿರಿಸಿಕೊಂಡು ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.
ತಾಲೂಕು ವ್ಯಾಪ್ತಿಯಲ್ಲಿ ಶೇ.89ರಷ್ಟು ಬಿತ್ತನೆಯಾಗಿದೆ. ಶೇ.41ರಷ್ಟು ಮಳೆಯ ಕೊರತೆಯಾಗಿದೆ. ಆದರೆ ಕೃಷಿಗೆ ಅಗತ್ಯವಿದ್ದಾಗ ಮಳೆ ಬಂದಿದ್ದರೆ ಮಾತ್ರ ಉಪಯೋಗವಾಗುತ್ತದೆ.
ಒಣಗಿರುವ ಬೆಳೆಯನ್ನು ಗಮನಿಸಿ ಅಧಿಕಾರಿಗಳು ವರದಿ ಸಿದ್ಧಪಡಿಸಬೇಕು ಎಂದು ಆದೇಶಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಣೆ ಇಲ್ಲದೆ ಸ್ಥಗಿತವಾಗಿವೆ.
ದೊಡ್ಡಘಟ್ಟ, ಟಿ.ಉಪ್ಪಾರಹಟ್ಟಿ, ಮುದ್ದಾಪುರ, ಬೊಗಳೇರಹಟ್ಟಿ ಇತರ ಗ್ರಾಮಗಳಲ್ಲಿ ಘಟಕಗಳು ಕೆಟ್ಟುಹೋಗಿವೆ. ಕವಾಡಿಗರಹಟ್ಟಿ ಪ್ರಕರಣ ನಡೆದ ನಂತರವೂ ಗ್ರಾಪಂ ಅಧಿಕಾರಿಗಳು ಎಚ್ಚೆತ್ತುಕೊಂಡಂತಿಲ್ಲ.
ಇವುಗಳ ಬಗ್ಗೆ ತಕ್ಷಣ ಗಮನ ಹರಿಸಬೇಕು. ಕುಡಿಯುವ ನೀರು ಪೂರೈಸುವುದಕ್ಕೆ ಬೆಸ್ಕಾಂ ಕಾರಣ ಹೇಳದೆ ವಿದ್ಯುತ್ ಸಂಪರ್ಕ ನೀಡಬೇಕು ಎಂದರು.
ಬೆಳಗಟ್ಟದಲ್ಲಿ ಕುಡಿಯುವ ನೀರು, ಬೀದಿ ದೀಪದ ಸಮಸ್ಯೆ ಉಲ್ಬಣಿಸಿದೆ. ತಕ್ಷಣ ಪಿಡಿಒ ಅವರನ್ನು ನೇಮಿಸಬೇಕು ಎಂದು ಬೆಳಗಟ್ಟ ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ತಕ್ಷಣ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪಿಡಿಒ ನೇಮಕ ಮಾಡುವುದಾಗಿ ಭರವಸೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ, ತಹಸೀಲ್ದಾರ್ ನಾಗವೇಣಿ, ತಾಪಂ ಇಒ ಹನುಮಂತಪ್ಪ, ಡಿವೈಎಸ್ಪಿ ಅನಿಲ್‌ಕುಮಾರ್, ಪಿಎಸ್‌ಐ ಲತಾ,
ಗ್ರಾಪಂ ಅಧ್ಯಕ್ಷೆ ದೀಪಾ ಮಹೇಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ತುರುವನೂರು ಪಿಡಿಒ ಅಂಜಿನಪ್ಪ, ಚಿಕ್ಕಗೊಂಡನಹಳ್ಳಿ ಪಿಡಿಒ ಮಂಜುಳ ಇತರರಿದ್ದರು.