ಜಿಲ್ಲೆ

ಜನಸಂಖ್ಯೆ ಸ್ಫೋಟಕ್ಕೆ ಕಡಿವಾಣ ಅಗತ್ಯ

ಮುಂಡರಗಿ: ಎರಡು ಮಕ್ಕಳ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಹೊಂದಬೇಕು. ಇದರಿಂದ ತಾಯಿ-ಮಕ್ಕಳ ಮರಣ ಪ್ರಮಾಣವನ್ನು ತಡೆಗಟ್ಟಬಹುದು ಮತ್ತು ಜನಸಂಖ್ಯೆ ಸ್ಫೋಟದಿಂದಾಗುವ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ, ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಸಿ.ಎಸ್. ಅರಸನಾಳ ಮಾತನಾಡಿ, ಭಾರತದ ಜನಸಂಖ್ಯೆ 142.86 ಕೋಟಿ ತಲುಪಿದೆ. ಚೀನಾ ದೇಶವನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಪ್ರಥಮ ಸ್ಥಾನ ಹೊಂದಿದೆ. ವಿಶ್ವದ ಒಟ್ಟು ಜಸಂಖ್ಯೆಯಲ್ಲಿ ಶೇ.17.7ರಷ್ಟು ಭಾರತೀಯರೇ ಇದ್ದಾರೆ. ಇದರಿಂದ ಭಾರತ ಇದೇ ರೀತಿ ಮುಂದುವರಿಸಿದರೆ ಅಭಿವೃದ್ಧಿಗೆ ಸಮಸ್ಯೆಯಾಗುತ್ತದೆ ಎಂದರು.

ಸಿಡಿಪಿಒ ಮಹಾದೇವ ಇಸರನಾಳ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯರಾದ ಜಯಲಕ್ಷ್ಮೀ ಕುರಹಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ ಸಜ್ಜನರ ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್.ಅಧಿಕಾರಿ ಆನಂದರೆಡ್ಡಿ ಮ್ಯಾಗೇರಿ ಸ್ವಾಗತಿಸಿದರು. ಉಪನ್ಯಾಸಕಿ ಆರ್.ಆರ್. ಇನಾಮದಾರ ಕಾರ್ಯಕ್ರಮ ನಿರೂಪಿಸಿದರು. ಕೆ.ವಿ. ಬಡಿಗೇರ ವಂದಿಸಿದರು.