ಜಿಲ್ಲೆ

ಜನಸಂಖ್ಯೆ ನಿಯಂತ್ರಣ ದೊಡ್ಡ ಸವಾಲು

Mysuru - Desk - Naveen Kumar H P

ಸರಗೂರು : ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಹೇಳಿದರು.


ಪಟ್ಟಣದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯೆ ದಿನವನ್ನು ಆಚರಿಸಲಾಗುತ್ತದೆ. ಮೂರು ದಶಕಗಳಿಂದ ವಿಶ್ವ ಜನಸಂಖ್ಯೆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.


ತಹಸೀಲ್ದಾರ್ ರುಕೀಯಾ ಬೇಗಂ ಮಾತನಾಡಿ, ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ ನೀಡುವುದು, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ ಎಂದರು.


ಜೆಎಸ್‌ಎಸ್ ಕಾಲೇಜು ಪ್ರಾಂಶುಪಾಲ ಮದೇವಸ್ವಾಮಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಚಲುವಕೃಷ್ಣ, ಸ್ವಾಮಿ,ನೂರಳಾಸ್ವಾಮಿ, ಸಣ್ಣ ತಾಯಮ್ಮ, ಸಮುದಾಯ ಆರೋಗ್ಯ ಕೇಂದ್ರ ಆಡಳಿತಾಧಿಕಾರಿ ಪಾರ್ಥಸಾರಥಿ, ಪಪಂ ಆರೋಗ್ಯಾಧಿಕಾರಿ ಸಂತೋಷ್ ಇತರರು ಇದ್ದರು.