ಕುರುಗೋಡು: ಜನಸಂಖ್ಯೆ ನಿಯಂತ್ರಣ ಯೋಜನೆ ಕೇವಲ ಆರೋಗ್ಯ ಇಲಾಖೆ ಕೆಲಸವಲ್ಲ. ಪ್ರತಿಯೊಂದು ಕುಟುಂಬದ ಜವಾಬ್ದಾರಿಯಾಗಿದೆ ಎಂದು ಆಯುಷ್ ವೈದ್ಯಾಧಿಕಾರಿ ರಂಗಸ್ವಾಮಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿವಿಧ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಜನಸಂಖ್ಯೆ ದಿನದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಸಂಖ್ಯೆ ಕಡಿವಾಣಕ್ಕೆ ಸರ್ಕಾರ ಕೈಗೊಳ್ಳುವ ಜಾಗೃತಿ ಕಾರ್ಯಕ್ರಮ ಫಲ ನೀಡುತ್ತಿಲ್ಲ. ಜನರು ಸ್ವಯಂಪ್ರೆರಿತರಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗದಿದ್ದಲ್ಲಿ ಸಾಮಾಜಿಕ ಸಮಸ್ಯೆ ಎದುರಾಗಲಿದೆ. ಅನಿಯಂತ್ರಿತವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಗಾಳಿ, ನೀರು, ಆಹಾರ ಜತೆಗೆ ಉತ್ತಮ ಪರಿಸರ, ನಿಸರ್ಗ ಸಂಪತ್ತು ಜನ ಸಾಮಾನ್ಯರಿಗೆ ಸಿಗುತ್ತಿಲ್ಲ ಎಂದರು.
ಆರೋಗ್ಯ ಸುರಕ್ಷಣಾಧಿಕಾರಿ ಮಂಜುನಾಥ್ ಕೋರಿ ಮಾತನಾಡಿ, ಮಕ್ಕಳನ್ನು ಪಡೆಯುವುದು ಆಯ್ಕೆಯಾಗಿರಬೇಕೆ ಹೊರತು ಅನಿವಾರ್ಯವಾಗಿರಬಾರದು. ಆರೋಗ್ಯ ಇಲಾಖೆ, ಜನ ಸಂಖ್ಯೆ ನಿಯಂತ್ರಣಕ್ಕೆ ಕಾರ್ಯಕ್ರಮಗಳ ಮೂಲಕ ಶ್ರಮಿಸುತ್ತಿದೆ ಎಂದರು.
ಪ್ರಮುಖರಾದ ಸುಧಾಕರ್, ಪ್ರಭಾಕರ್, ನಂದೀಶ, ವನಜಾಕ್ಷಿ, ಪಿ ಹೊನ್ನೂರ ಸಾಬ್, ಮಹಾಲಕ್ಷ್ಮೀ , ಮಹೆಬೂಬ್ ಬಾಷಾ ಇತರರಿದ್ದರು.