ಜಿಲ್ಲೆ

ಜನಾಕರ್ಷಣೀಯ ಸೆಲ್ಫಿ ಪಾಯಿಂಟ್ : ಒಳಮೊಗ್ರು ಗ್ರಾಮದ ಜಂಕ್ಷನ್ ಬಳಿ ಪೊರ್ಲುದ ಕುಂಬ್ರಕ್ಕಾಗಿ ಹೊಸ ಕಲ್ಪನೆ

ಸೌಮ್ಯ ಆರ್

ಶಶಿ ಕುತ್ಯಾಳ ಈಶ್ವರಮಂಗಲ

ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ‘ಪೊರ್ಲುದ ಕುಂಬ್ರ’ ಪರಿಕಲ್ಪನೆಯೊಂದಿಗೆ ‘ಸೆಲ್ಫಿ ಪಾಯಿಂಟ್’ ನಿರ್ಮಾಣದ ವಿಭಿನ್ನ ಪ್ರಯೋಗವೊಂದು ನಡೆದಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಜಂಕ್ಷನ್ ಬಳಿಯ ಅಶ್ವತ್ಥ ಕಟ್ಟೆಯ ಎದುರು ಭಾಗದಲ್ಲಿ ಹೆದ್ದಾರಿ ಬದಿಯಲ್ಲಿ ‘ಪೊರ್ಲುದ ಕುಂಬ್ರ ಸೆಲ್ಫಿ ಪಾಯಿಂಟ್’ ಆಕರ್ಷಣೀಯವಾಗಿ ರೂಪುಗೊಂಡಿದೆ. ಕುಂಬ್ರಕ್ಕೆ ಈ ಹಿಂದೆ ಬಾಂತಲಪ್ಪು ಎಂಬ ಹೆಸರಿತ್ತು. ಬಾಂತಲಪ್ಪು ಹೆಸರು ಕಾಲಕ್ರಮೇಣವಾಗಿ ಮರೆಯಾಗಿ ಕುಂಬ್ರವಾಗಿತ್ತು. ಈ ಬಾಂತಲಪ್ಪುವಿನ ಇತಿಹಾಸ ಸಾರುವ ಪ್ರಯತ್ನವೂ ಈ ಸೆಲ್ಫಿ ಪಾಯಿಂಟ್ ಮೂಲಕ ನಡೆದಿದೆ. ಎತ್ತಿನ ಗಾಡಿ, ನಾಲ್ಕು ಕಂಬಗಳ ಗೋಪುರ ಹಾಗೂ ಬಾಂತಲಪ್ಪುವಿನ ಇತಿಹಾಸ ಸಾರುವ ಬರಹ ಫಲಕ ಸೆಲ್ಫಿ ಪಾಯಿಂಟ್‌ನಲ್ಲಿದೆ.

ಸ್ವಚ್ಛ ಕುಂಬ್ರದ ಕಲ್ಪನೆಯಲ್ಲಿ ಈ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲಾಗಿದೆ. ಕುಂಬ್ರ ವರ್ತಕರ ಸಂಘದ 20ನೇ ವರ್ಷಾಚರಣೆಯ ಅಂಗವಾಗಿ ಶಾಶ್ವತ ಯೋಜನೆಯೊಂದನ್ನು ರೂಪಿಸುವ ಸಂಘದ ಕೋರಿಕೆಯ ಮೇರೆಗೆ ಪುತ್ತೂರಿನ ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕ ಮಹಮ್ಮದ್ ಸಾದಿಕ್ ಹಾಜಿ ಅವರು ಕೊಡುಗೆಯಾಗಿ ಈ ಪೊರ್ಲುದ ಕುಂಬ್ರ ‘ಸೆಲ್ಫಿ ಪಾಯಿಂಟ್’ 2 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡುವ ಮೂಲಕ ಕುಂಬ್ರ ಪೇಟೆಯ ಅಂದಕ್ಕೊಂದು ಕಿರು ಕಾಣಿಕೆ ಸಲ್ಲಿಸಿದ್ದಾರೆ. ಸೆಲ್ಫಿ ಪಾಯಿಂಟ್‌ನಲ್ಲಿರುವ ಕುಂಬ್ರದ ಇತಿಹಾಸದ ಮಾಹಿತಿಯಿರುವ ಫಲಕದಿಂದಾಗಿ ಅಲ್ಲಿನ ಗತವೈಭವವನ್ನು ಅರಿತುಕೊಳ್ಳುವ ಅವಕಾಶ ಆಸಕ್ತರಿಗೆ ಸಿಕ್ಕಿದೆ.

ಸೆಲ್ಫಿ ಪಾಯಿಂಟ್ ಈ ದಾರಿಯಲ್ಲಿ ಹಾಗೂ ಹೆದ್ದಾರಿಯಲ್ಲಿ ಸಾಗುವ ಮಂದಿಯ ಗಮನ ಸೆಳೆಯುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಗ್ರಾಮದ ಜನತೆಯೂ ಕೂಡ ಸೆಲ್ಫಿ ಪಾಯಿಂಟ್‌ಗೆ ಬಂದು ವೀಕ್ಷಣೆ ಮಾಡಿ, ಸೆಲ್ಫಿ ತೆಗೆದುಕೊಳ್ಳವ ಜತಗೆ ಇತಿಹಾಸ ಬೋರ್ಡಿನಲ್ಲಿರುವ ವಿಚಾರಗಳನ್ನು ಓದಿ ಅರಿತುಕೊಳ್ಳುತ್ತಿದ್ದಾರೆ.

ಎತ್ತಿನ ಗಾಡಿಯ ಸಂಬಂಧ

ವಿಟ್ಲ ಮತ್ತು ಪಂಜ ಸೀಮೆಯ ಗಡಿ ಪ್ರದೇಶವಾಗಿದ್ದ ಕುಂಬ್ರದಲ್ಲಿ ಒಂದು ಗಡಿ ಕಲ್ಲು ‘ಬಾಂದ್ ಕಲ್‌ಲ್- ಕಡಪು’ ಇತ್ತು. ಹಾಗಾಗಿಯೇ ಬಾಂತಲಪ್ಪು ಹೆಸರು ಪಡೆದುಕೊಂಡಿತ್ತು. ಹಿಂದಿನ ಕಾಲದಲ್ಲಿ ಈ ಭಾಗದಲ್ಲಿ ಎತ್ತಿನ ಗಾಡಿಯೇ ಜಾಸ್ತಿ ಇತ್ತು. ಮಂಗಳೂರು, ಬಂಟ್ವಾಳ ಕಡೆಯಿಂದ ಸರಕು ಸಾಮಾಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬರುತ್ತಿದ್ದ ವ್ಯಾಪಾರಿಗಳು ರಾತ್ರಿ ವೇಳೆ ಕುಂಬ್ರದಲ್ಲಿ ತಂಗುತ್ತಿದ್ದರು. ಮಡಿಕೇರಿ, ಸಂಪಾಜೆ, ಸುಳ್ಯ ಕಡೆಯಿಂದ ಕೃಷಿ ಉತ್ಪನ್ನಗಳನ್ನು ಹೇರಿಕೊಂಡು ಬರುತ್ತಿದ್ದ ಎತ್ತಿನಗಾಡಿಗಳು ಕುಂಬ್ರದಲ್ಲಿ ತಂಗುತ್ತಿದ್ದವು. ಹೆಚ್ಚಿನ ವ್ಯಾಪಾರಿಗಳು ಅಲ್ಲಿ ಆಹಾರ ಹಾಗೂ ಇನ್ನಿತರ ವಸ್ತುಗಳ ವ್ಯಾಪಾರ-ವ್ಯವಹಾರ ಮಾಡಿಕೊಳ್ಳುತ್ತಿದ್ದರು. ಎತ್ತಿನ ಗಾಡಿ ನಿರ್ಮಾಣದ ಮೂಲಕ ಈ ಇತಿಹಾಸವನ್ನು ಸಾಂಕೇತಿಕವಾಗಿ ಸೆಲ್ಫಿ ಪಾಯಿಂಟ್‌ನಲ್ಲಿ ತೋರಿಸುವ ಕೆಲಸ ಆಗಿದೆ. ಸೆಲ್ಫಿ ಪಾಯಿಂಟ್‌ನಲ್ಲಿರುವ ಸಿಮೆಂಟ್‌ನಿಂದ ನಿರ್ಮಿತ ನಾಲ್ಕು ಕಂಬಗಳ ಗೋಪುರ ಆಕರ್ಷಕ ಶೈಲಿಯಲ್ಲಿದೆ. ನಾಲ್ಕು ಕಂಬಗಳಲ್ಲಿಯೂ ಚಕ್ರ, ಸ್ತಂಭ ಪದ್ಮದ ಚಿತ್ರಣವಿದೆ. ಇತಿಹಾಸ ಸಾರುವ ಸಿಮೆಂಟ್ ನಿರ್ಮಿತ ಬರಹ ಬೋರ್ಡಿನಲ್ಲಿ ದೊಡ್ಡ ಅಕ್ಷರಗಳಲ್ಲಿ ಇತಿಹಾಸವನ್ನು ದಾಖಲಿಸಲಾಗಿರುವುದರಿಂದ ಮಕ್ಕಳಿಂದ ವೃದ್ಧರ ತನಕ ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬಹುದಾಗಿದೆ.

ಕುಂಬ್ರದ ಸೆಲ್ಫಿ ಪಾಯಿಂಟ್‌ನಲ್ಲಿ ಇರಿಸಲಾಗಿರುವ ಎತ್ತಿನ ಗಾಡಿಯದ್ದು ನನ್ನ ಕಲ್ಪನೆಯಲ್ಲ. ನನ್ನ ಆತ್ಮೀಯ ಸ್ನೇಹಿತರಾಗಿರುವ ನಾರಾಯಣ ಆಚಾರ್ ನನ್ನೊಂದಿಗೆ ಹಂಚಿಕೊಂಡ ಕಲ್ಪನೆಯಾಗಿದೆ. ಹಿಂದಿನ ಕಾಲದಲ್ಲಿ ಬಾಂತಲಪ್ಪುವಿನಲ್ಲಿ ಎತ್ತಿನ ಗಾಡಿಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಆ ನೆನಪಿಗಾಗಿ ನಾರಾಯಣ ಆಚಾರ್ ಅವರ ಕೆತ್ತನೆಯಲ್ಲೇ ಎತ್ತಿನ ಗಾಡಿಯನ್ನು ನಿರ್ಮಾಣ ಮಾಡಲಾಗಿದೆ. ಈ ಆಕರ್ಷಣ್ ಸಂಸ್ಥೆಯ ವತಿಯಿಂದ ಕೊಡುಗೆಯಾಗಿ ನಿರ್ಮಿಸಿ ಕೊಟ್ಟಿದ್ದೇವೆ. ಮಹಮ್ಮದ್ ಸಾದಿಕ್ ಹಾಜಿ, ಆಕರ್ಷಣ್ ಇಂಡಸ್ಟ್ರೀಸ್ ಮಾಲೀಕ https://www.vijayavani.net/mangalore-aquited-exice-case https://www.vijayavani.net/installation-of-high-mast-street-light