ಜಿಲ್ಲೆ

ಜನಾಕರ್ಷಿಸಿದ ಇಲಾಖಾ ಮಳಿಗೆಗಳು

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿ ತಾಲೂಕು ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮದ ಶಾದಿ ಮಹಲ್ ಸಭಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಹೊರ ಆವರಣದ ಮೈದಾನದಲ್ಲಿ ಕೆಲವು ಮಳಿಗೆಗಳನ್ನು ಉದ್ಘಾಟಿಸಿದರು. ಸಚಿವರ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದವರನ್ನು ಈ ಮಳಿಗೆಗಳು ಆಕರ್ಷಿಸಿದವು. ಜಿಲ್ಲಾಡಳಿತ ವತಿಯಿಂದ ತೆರೆಯಲಾಗಿದ್ದ ಮಳಿಗೆಗಳು ಹಲವು ವಿಶೇಷತೆಗಳಿಂದ ಗಮನ ಸೆಳೆದವು.

ಎಳ್ಳುಂಡೆ, ಕಡ್ಲೆ ಮಿಠಾಯಿ, ಗಿಣಿಕೆ ಸೊಪ್ಪಿನ ಚಟ್ನಿ, ಬೇಯಿಸಿ ಒಗ್ಗರಣೆ ಹಾಕಿದ ಕಡಲೆ, ತಂಬಿಟ್ಟು, ಗುಲಾಬ್ ಜಾಮೂನ್…ಹೀಗೆ ಸುಮಾರು ೫೦ಕ್ಕೂ ಹೆಚ್ಚು ಖಾದ್ಯಗಳನ್ನು ಇಟ್ಟುಕೊಂಡು ಮಹಿಳೆಯರು ಅಲ್ಲಿ ಬಂದಿದ್ದವರಿಗೆಲ್ಲಾ ಸವಿಯಲು ಕೊಡುತ್ತಿದ್ದರು. ಮತ್ತೊಂದು ಕಡೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ ಪ್ರದರ್ಶನಕ್ಕೆ ಇಡಲಾಗಿತ್ತು. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ತೆರೆಯಲಾಗಿದ್ದ ಮಳಿಗೆಯಲ್ಲಿ ಕಂಡು ಬಂದ ದೃಶ್ಯ. ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರದರ್ಶನ ಏರ್ಪಡಿಸಲಾಗಿತ್ತು. ಕಡಿಮೆ ಎಣ್ಣೆ, ಉತ್ತಮ ಆರೋಗ್ಯ ಎನ್ನುವ ಘೋಷ ವಾಕ್ಯದಲ್ಲಿ ನಡೆದ ಈ ಖಾದ್ಯಗಳ ಪ್ರದರ್ಶನ ವಿಶೇಷವಾಗಿ ಗಮನ ಸೆಳೆಯಿತು.

ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಲು ಆಗಮಿಸಿದವರು ಮಾತ್ರವಲ್ಲದೆ, ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು, ಅಧಿಕಾರಿಗಳು ಇಲ್ಲಿ ಖಾದ್ಯಗಳ ರುಚಿ ನೋಡಿ ಇದರ ಹಿಂದೆ ಇದ್ದ ಮಹಿಳೆಯರಿಗೆ ಶಹಬ್ಬಾಸ್ ಹೇಳಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಳಿಗೆಯಲ್ಲಿ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಇಲಾಖೆ ವತಿಯಿಂದ ಬೇರೆ ಬೇರೆ ನಿಗಮ ಮಂಡಳಿಗಳಲ್ಲಿ ಸಿಗುವ ಸೌಲಭ್ಯ, ರಿಯಾಯತಿ, ವಿದ್ಯಾರ್ಥಿಗಳಿಗೆ ಆಗುವ ಅನುಕೂಲಗಳು, ಸಬ್ಸಿಡಿ, ವಿದ್ಯಾಭ್ಯಾಸದ ಸಾಲ ಸೇರಿದಂತೆ ವಿವಿಧ ಮಾಹಿತಿಗಳನ್ನು ಈ ಮಳಿಗೆಯಲ್ಲಿ ನೀಡಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಳಿಗೆಯಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಇರುವ ಸರ್ಕಾರದ ಸವಲತ್ತುಗಳ ಮಾಹಿತಿ ಕೊಡಲಾಗುತ್ತಿತ್ತು,

ಕೆಎಸ್‌ಆರ್‌ಟಿಸಿಯಿಂದಲೂ ಒಂದು ಮಳಿಗೆ ತೆರಯಲಾಗಿತ್ತು. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಆಗುತ್ತಿರುವ ಅನುಕೂಲವನ್ನು ಸಾರ್ವಜನಿಕರಿಗೆ ತಿಳಿಸಲು ಈ ಮಳಿಗೆಯಲ್ಲಿ ಪ್ರಚಾರ ಸಾಮಗ್ರಿ ಇಡಲಾಗಿತ್ತು. ಈ ತನಕ ಎಷ್ಟು ಮಂದಿ ಈ ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ ? ಸರ್ಕಾರ ಎಷ್ಟು ಹಣವನ್ನು ಯೋಜನೆಗಾಗಿ ವಿನಿಯೋಗಿಸಿದ್ದಾರೆ ಎನ್ನುವ ವಿವರಗಳೂ ಈ ಮಳಿಗೆಯಲ್ಲಿ ಲಭ್ಯವಿದ್ದವು.

ಕೈ ಮಗ್ಗ ಮತ್ತು ಜವಳಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕೊಡಗು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕೆ ವಿಭಾಗ, ಜಿಲ್ಲಾ ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತಿತರ ಇಲಾಖೆಗಳು ವಸ್ತು ಪ್ರದರ್ಶನ ಆಯೋಜಿಸಿದ್ದವು. ಸಬ್ಸಿಡಿಯಲ್ಲಿ ಸಿಗುವ ಕೃಷಿ ಯಂತ್ರೋಪಕರಣಗಳ ಮಾಹಿತಿ ಸೇರಿದಂತೆ ಹಲವು ವಿವರಗಳು ಈ ಮಳಿಗೆಗಳಿಂದ ಲಭ್ಯವಾದವು.

ಸಂಜೀವಿನಿ ಒಕ್ಕೂಟದಿಂದ ತೆರೆಯಲಾಗಿದ್ದ ಮಳಿಗೆಯಲ್ಲಿ ಸ್ತ್ರೀ ಶಕ್ತಿ ಸಂಘಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಕಬ್ಬು, ಹಣ್ಣುಗಳು, ತರಕಾರಿ, ಮೌಲ್ಯವರ್ಧಿತ ಉತ್ಪನ್ನಗಳು, ಕಾಚಂಪುಳಿ, ಒಣಗಿದ ಗಾಂಧಾರಿ ಮೆಣಸು, ಉಣ್ಣೆಯ ಟೋಪಿಗಳು ಮತ್ತಿತರ ವಸ್ತುಗಳು ಇಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಹೆಚ್ಚು ಮಂದಿ ಈ ಮಳಿಗೆಗೆ ಭೇಟಿ ಕೊಟ್ಟು ತಮ್ಮ ಉತ್ಸಾಹ ತಣಿಸಿಕೊಂಡರು.
ಸಮಸ್ಯೆಗಳನ್ನು ಹೇಳಿಕೊಳ್ಳಲು ಆಯೋಜಿಸಲಾಗಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ತೆರೆಯಲಾಗಿದ್ದ ಮಳಿಗೆಗಳ ಪ್ರಯೋಗ ಇಲ್ಲಿಗೆ ಆಗಮಿಸಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಮುಂದಿನ ಜನತಾದರ್ಶನಗಳನ್ನೂ ಈ ರೀತಿಯಲ್ಲಿ ಮಳಿಗೆಗಳನ್ನು ತೆರೆದು ಜಾಗೃತಿ ಮೂಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.