ಜಿಲ್ಲೆ

ಪೋಪ್ ಫ್ರಾನ್ಸಿಸ್ ನಿಧನ, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಚಿಕ್ಕಬಳ್ಳಾಪುರ: ಪೋಪ್ ಫ್ರಾನ್ಸಿಸ್ ನಿಧನದ ಶೋಕಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಮುಂದೂಡಿಕೆಯಾಗಿದೆ.
ಜಿಲ್ಲಾ ಕೇಂದ್ರದಲ್ಲಿ ಏ.23 ಹಾಗೂ ಏ.24 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಕೈಗೊಳ್ಳಲಾಗಿತ್ತು. ಇದೇ ವೇಳೆ ನಗರದಲ್ಲಿ 17.83 ಕೋಟಿ ರೂ ವೆಚ್ಚದಲ್ಲಿ  ನಿರ್ಮಿಸಿರುವ ಕನ್ನಡ ಭವನವು ಲೋಕಾರ್ಪಣೆಗೊಳ್ಳಬೇಕಾಗಿತ್ತು. ಕಾರ್ಯಕ್ರಮದ ಯಶಸ್ವಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಸಭೆಗಳನ್ನು ಕೈಗೊಂಡು ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧ ಭಾಗಗಳ ಹಲವರಿಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದು ಬಹುತೇಕ ಸಿದ್ಧತೆಗಳು ಮುಗಿದು, ನಾಡು ನುಡಿಯ ಹಬ್ಬದ ಆಚರಣೆಗೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದರ ನಡುವೆ ಪೋಪ್ ಫ್ರಾನ್ಸಿಸ್ ನಿಧನದ ಹಿನ್ನೆಲೆಯಲ್ಲಿ ಸಮ್ಮೇಳನದ ಮುಂದೂಡಿಕೆಯ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರವು ದೇಶದಾದ್ಯಂತ ಏ.23 ಹಾಗೂ ಏ.24 ರಂದು ಶೋಕಾಚರಣೆಯನ್ನು ಘೋಷಿಸಿದೆ. ಇದರಿಂದ ಸಂಭ್ರಮಾಚರಣೆಯ ಕಾರ್ಯಕ್ರಮದ ಮುಂದೂಡಿಕೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿ, ಕಸಾಪ ಪದಾಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆ.

*ಪೋಪ್ ಫ್ರಾನ್ಸಿಸ್ ನಿಧನದ ಶೋಕಾಚರಣೆ ಹಿನ್ನೆಲೆಯಲ್ಲಿ ಏ.23 ಹಾಗೂ ಏ.24 ರಂದು ನಿಗದಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿದೆ. ಮತ್ತೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ, ಕಾರ್ಯಕ್ರಮಕ್ಕೆ ಸೂಕ್ತ ದಿನವನ್ನು ನಿಗದಿಪಡಿಸಲಾಗುತ್ತದೆ.

ಪ್ರೊ ಕೋಡಿರಂಗಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ, ಚಿಕ್ಕಬಳ್ಳಾಪುರ