ಜಿಲ್ಲೆ

ಪಿಒಪಿ ಗಣಪತಿ ವಿಗೃಹ ಆದೇಶಕ್ಕೆ ಸೀಮಿತ : ಕ್ರಮ ಕೈಗೊಳ್ಳಬೇಕಿದೆ ಪರಿಸರ ಇಲಾಖೆ

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ)ನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ, ರಾಣೆಬೆನ್ನೂರ ಶಿಗ್ಗಾಂವಿ, ಹಾವೇರಿ ಸೇರಿ ಜಿಲ್ಲಾದ್ಯಂತ ಪಿಒಪಿ ಗಣಪತಿ ವಿಗೃಹ ಮಾರಾಟಕ್ಕೆ ಕೆಲವರು ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಣೆಬೆನ್ನೂರ ನಗರದ ಚೌಡೇಶ್ವರಿ ದೇವಸ್ಥಾನ ಬಳಿ, ತಾಲೂಕಿನ ಕುಮಾರಪಟ್ಟಣ, ಮಾಗೋಡ ರಸ್ತೆ, ಶಿಗ್ಗಾಂವಿ ಪಟ್ಟಣ, ಹಾವೇರಿ ಎಪಿಎಂಸಿ ಆವರಣ ಸೇರಿ ಜಿಲ್ಲೆಯ ವಿವಿಧೆಡೆ ಕೆಲವರು ಪಿಒಪಿ ಗಣಪತಿ ಮೂರ್ತಿ ತಯಾರಿಸಿ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಬೇಕಾದ ಪರಿಸರ ಇಲಾಖೆ, ನಗರಸಭೆ ಅಧಿಕಾರಿಗಳು ಮೌನ ವಹಿಸಿರುವುದು ನೈಸರ್ಗಿಕ ಗಣಪತಿ ಮೂರ್ತಿ ತಯಾರಿಸುವ ಕಲಾವಿದರ ಆಕ್ರೋಶಕ್ಕೆ ಕಾರಣವಾಗಿದೆ.

ಕೇವಲ ಆದೇಶಕ್ಕೆ ಸೀಮಿತ

ಪಿಒಪಿ ಗಣಪತಿ ಮೂರ್ತಿ ನಿಷೇಧಿಸಿ ಸರ್ಕಾರ 5 ವರ್ಷದ ಹಿಂದೆಯೇ ಆದೇಶ ಹೊರಡಿಸಿದೆ. ಸರ್ಕಾರ ಆದೇಶ ಹೊರಬಂದ ವರ್ಷ ಪಿಒಪಿ ಮೂರ್ತಿ ಮಾರಾಟ ಕೊಂಚ ತಗ್ಗಿತ್ತು. ನಂತರದ ವರ್ಷಗಳಲ್ಲಿ ಚತುರ್ಥಿಗೆ ಇನ್ನೇನು ಎರಡ್ಮೂರು ದಿನವಿದ್ದಾಗ ಪುಣೆ, ಮುಂಬಯಿನಿಂದ ತರಿಸಿಕೊಂಡು ಕದ್ದು ಮುಚ್ಚಿ ಮಾರಾಟ ಮಾಡಲಾಗುತ್ತಿತ್ತು.

ಆದರೆ, ಪ್ರಸಕ್ತ ವರ್ಷ ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಸ್ಥಳೀಯರೇ ಪಿಒಪಿ ಮೂರ್ತಿ ತಯಾರಿಸುತ್ತಿದ್ದಾರೆ. ಅಲ್ಲದೆ, ಸ್ಥಳೀಯರಲ್ಲದ ಕೆಲವರು ಪುಣೆ, ಮುಂಬಯಿ ಸೇರಿ ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಬಂದು ಅಲ್ಲಲ್ಲಿ ಬಾಡಿಗೆ ಶೆಡ್​ಗಳನ್ನು ಮಾಡಿಕೊಂಡು ಪಿಒಪಿ ಗಣಪತಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸ್ಥಳೀಯ ಕೆಲ ಕಲಾವಿದರೂ ಸಾಥ್ ನೀಡುತ್ತಿದ್ದಾರೆ.

ಪಿಒಪಿ ಮೂರ್ತಿ ತಯಾರಿಕೆಯಿಂದ ಸ್ಥಳೀಯವಾಗಿ ಸಾಂಪ್ರದಾಯಿಕ ಗಣಪತಿ ಮೂರ್ತಿ ತಯಾರಿಸುವವರಿಗೆ ಆರ್ಥಿಕ ನಷ್ಟ ಉಂಟಾಗುವ ಜತೆಗೆ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಪರಿಸರ ಇಲಾಖೆ ಹಾಗೂ ಜಿಲ್ಲಾಡಳಿತ, ಸ್ಥಳೀಯ ನಗರಸಭೆ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಪಿಒಪಿ ವಿಗೃಹ ತಯಾರಿಸುವುದನ್ನು ಸ್ಥಗಿತಗೊಳಿಸಬೇಕು ಹಾಗೂ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಕಲಾವಿದರು ಆಗ್ರಹಿಸಿದ್ದಾರೆ.

ಕಲಾವಿದರ ಅಳಲು

ನಾವು ತಿಂಗಳು ಮುಂಚಿತವಾಗಿ ಮಣ್ಣಿನ ಗಣಪತಿ ಮೂರ್ತಿ ತಯಾರಿಸಲು ಸಿದ್ಧತೆ ಮಾಡಿಕೊಂಡಿರುತ್ತೇವೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನೈಸರ್ಗಿಕ ಬಣ್ಣ ಬಳಸುತ್ತೇವೆ. ಆದರೆ, ನಗರಸಭೆ, ಪರಿಸರ ಇಲಾಖೆಯವರು ಆರಂಭದಲ್ಲಿ ಪಿಒಪಿ ಗಣಪತಿ ನಿಷೇಧ ಎಂದು ಹೇಳಿ ಸ್ಥಳೀಯರಿಗೆ ಮಾರಾಟ ಮಾಡಲು ಅವಕಾಶ ನೀಡಲ್ಲ. ಕೊನೆ ಗಳಿಗೆಯಲ್ಲಿ ಕೆಲವರು ರಾಜಾರೋಷವಾಗಿ ಪಿಒಪಿ ಮೂರ್ತಿ ಮಾರಾಟ ಮಾಡುತ್ತಾರೆ. ಅಂಥವರ ವಿರುದ್ಧ ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ಹೀಗಾದರೆ ನಿಜವಾದ ಕಲಾವಿದರು ಏನು ಮಾಡಬೇಕು? ಲಕ್ಷಾಂತರ ಬಂಡವಾಳ ಹಾಕಿ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಏನು ಮಾಡಬೇಕು ಎಂದು ನೈಸರ್ಗಿಕ ಗಣಪತಿ ಮೂರ್ತಿ ತಯಾರಕರು ಅಳಲು ತೋಡಿಕೊಂಡಿದ್ದಾರೆ.

ಪಿಒಪಿ ಗಣಪತಿ ನಿಷೇಧ ಎಂದು ಹೇಳುವ ಅಧಿಕಾರಿಗಳೇ ತಮ್ಮ ಕಚೇರಿಯಲ್ಲಿ ನೈಸರ್ಗಿಕ ಬದಲು ಪಿಒಪಿ ಮೂರ್ತಿ ಇಡುತ್ತಾರೆ. ಹಬ್ಬಕ್ಕೆ ಒಂದು ವಾರವಿದ್ದಾಗ ಕೈ ಬಿಸಿ ಮಾಡುವ ವ್ಯಾಪಾರಸ್ಥರಿಗೆ ರಾಜಾರೋಷವಾಗಿ ಪಿಒಪಿ ಮೂರ್ತಿ ಮಾರಾಟಕ್ಕೆ ಬಿಡುತ್ತಾರೆ. ಜಿಲ್ಲಾಡಳಿತ ಹಾಗೂ ಸ್ಥಳೀಯ ನಗರಸಭೆ ಅಧಿಕಾರಿಗಳು ಪಿಒಪಿ ನಿಷೇಧಿಸುವುದಾದರೆ ಕಡ್ಢಾಯವಾಗಿ ಮಾಡಬೇಕು. ಇಲ್ಲವಾದರೆ ಎಲ್ಲರಿಗೂ ಎಲ್ಲ ರೀತಿಯ ಗಣಪತಿ ಮೂರ್ತಿ ಮಾರಾಟಕ್ಕೆ ಅವಕಾಶ ನೀಡಬೇಕು. | ಹೆಸರು ಹೇಳಲಿಚ್ಛಿಸದ ನೈಸರ್ಗಿಕ ಗಣಪತಿ ತಯಾರಕ, ರಾಣೆಬೆನ್ನೂರ
ಪಿಒಪಿ ಗಣಪತಿ ಮಾರಾಟಕ್ಕೆ ಯಾವ ಕಾರಣಕ್ಕೂ ಅವಕಾಶವಿಲ್ಲ. ನಗರದಲ್ಲಿ ಪಿಒಪಿ ಮೂರ್ತಿ ತಂದವರ ವಿರುದ್ಧ ಪರಿಸರ ಇಲಾಖೆ, ಪೊಲೀಸರು ಹಾಗೂ ತಹಸೀಲ್ದಾರ್ ಅವರೊಂದಿಗೆ ತಂಡ ರಚಿಸಿ ದಾಳಿ ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. | ಫಕೀರಪ್ಪ ಇಂಗಳಗಿ, ನಗರಸಭೆ ಆಯುಕ್ತ, ರಾಣೆಬೆನ್ನೂರ