ಮಂಡ್ಯ: ಇತ್ತೀಚಿನ ವರ್ಷಗಳಲ್ಲಿ ಕೃಷಿ ಚಟುವಟಿಕೆ ರೈತರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾರಣ ಅವಶ್ಯಕತೆಗೆ ತಕ್ಕಂತೆ ನೀರಿನ ಲಭ್ಯತೆ ಇಲ್ಲದಿರುವುದು. ಬೇಸಾಯಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಹೇಗಾದರೂ ಕಷ್ಟಪಟ್ಟು ಹೊಂದಿಸಿಕೊಳ್ಳಬಹುದು. ಆದರೆ ನೀರಿಲ್ಲದಿದ್ದರೆ ಎಲ್ಲವೂ ವ್ಯರ್ಥ. ಇಂತಹ ಸಮಸ್ಯೆ ಎದುರಾಗಬಾರದೆನ್ನುವ ಕಾರಣಕ್ಕೆ ಮಳವಳ್ಳಿ ತಾಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಹಾತ್ವಾಕಾಂಕ್ಷೆಯ ಯೋಜನೆಯೇ ಪೂರಿಗಾಲಿ ಹನಿ ನೀರಾವರಿ.
ಹಿಂದೆ ಪಿ.ಎಂ.ನರೇಂದ್ರಸ್ವಾಮಿ ಅವರು ಶಾಸಕರಾಗಿದ್ದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ನಂತರ ವಿವಿಧ ಕಾರಣಕ್ಕೆ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಶಾಸಕ ನರೇಂದ್ರಸ್ವಾಮಿ ಅವರೇ ಯೋಜನೆ ಅನುಷ್ಠಾನಕ್ಕೆ ಟೊಂಕಕಟ್ಟಿ ನಿಂತಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ರೈತರನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಏನಿದು ನೀರಾವರಿ ಯೋಜನೆ?: ಹೊರಗಿನಿಂದ ನೋಡಿದವರಿಗೆ ಮಂಡ್ಯ ಸಮೃದ್ಧವಾಗಿರುವ, ಹಸಿರಿನಿಂದ ಕಂಗೊಳಿಸುವ ಜಿಲ್ಲೆ ಎಂದುಕೊಳ್ಳುತ್ತಾರೆ. ಆದರೆ ವಾಸ್ತವ ಚಿತ್ರಣವೇ ಬೇರೆ. ಕೆಆರ್‌ಎಸ್ ಅಣೆಕಟ್ಟೆ ಇದ್ದರೂ ಮಳವಳ್ಳಿ, ಮದ್ದೂರು ತಾಲೂಕಿನ ಕಡೇ ಭಾಗದ ರೈತರ ಪಾಡು ಹೇಳತೀರದು. ಡ್ಯಾಂನಿಂದ ನಾಲೆಯಲ್ಲಿ ನೀರು ಬಿಟ್ಟರೆ ಕೊನೆ ಭಾಗಕ್ಕೆ ತಲುಪುವುದಕ್ಕೆ ಐದಾರೂ ದಿನ ಬೇಕಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವವರು ಬೋರ್‌ವೆಲ್ ಮೊರೆ ಹೋದರೆ, ಬಹುತೇಕರು ಡ್ಯಾಂ ನೀರನ್ನೇ ಆಶ್ರಯಿಸಬೇಕಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ಹಿನ್ನಡೆ ಅನುಭವಿಸುವಂತಾಗಿದೆ.
ಈ ಕಾರಣಕ್ಕೆ ಮಳವಳ್ಳಿ ತಾಲೂಕಿನಲ್ಲಿ ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಯೋಜನೆ ರೂಪಿಸಲಾಗಿದೆ. ತಾಲೂಕಿನ ಸಂಪೂರ್ಣ ಒಣ ಪ್ರದೇಶವೆಂದರೆ ಬಿ.ಜಿ ಪುರ ಹೋಬಳಿ. ಈ ಭಾಗಕ್ಕೆ ಮಳೆಯೇ ನೀರಿನ ಮೂಲ ಎನ್ನುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಿ.ಜಿ ಪುರ ಹೋಬಳಿಯ 30 ಸಾವಿರ ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುವಂತೆ 593 ಕೋಟಿ ರೂ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಅಗತ್ಯವಿರುವ ನೀರನ್ನು ವಿಶ್ವೇಶ್ವರಯ್ಯ ನಾಲೆ ಅಚ್ಚುಕಟ್ಟು ಹಾಗೂ ಕೆಆರ್‌ಎಸ್ ಅಣೆಕಟ್ಟೆಯ ಕೆಳಭಾಗದಲ್ಲಿರುವ ಡ್ಯಾಂನ ಅಚ್ಚುಕಟ್ಟಿನಲ್ಲಿ ಈಗಾಗಲೇ ಭೂ ಪರಿವರ್ತನೆಗೊಂಡು ನಗರೀಕರಣವಾಗಿರುವ ಪ್ರದೇಶದಲ್ಲಿ ನೀರಿನ ಉಳಿತಾಯವಾಗುವ ಹಾಗೂ ಬಿ.ಜಿ ಪುರ ನಾಲೆಗೆಂದು ಹಂಚಿಕೆಯಾಗಿರುವ ಉಳಿತಾಯದ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಚಾಲನೆ ಸಿಕ್ಕಿದೆ. ಮಾತ್ರವಲ್ಲದೆ ಅಂತಿಮ ಹಂತದಲ್ಲಿದೆ. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಬರೋಬರಿ 51 ಗ್ರಾಮದ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಮಾತ್ರವಲ್ಲದೆ 16 ಕೆರೆಗೆ ನೀರು ತುಂಬಲಿದೆ. ಇದರೊಂದಿಗೆ ರೈತರಿಗೆ ನೀರಿನ ‘ವರಿ’ ಇಲ್ಲದಂತಾಗಲಿದೆ.
ಬದಲಾಗಬೇಕಿದೆ ಬೆಳೆ ಪದ್ಧತಿ: ಯೋಜನೆ ಕುರಿತು ಸಾಧಕ ಒಂದೆಡೆಯಾದರೆ, ಬಾಧಕದ ಬಗ್ಗೆಯೂ ಚರ್ಚೆಯಾಗುತ್ತಿದೆ. ಇದರಿಂದ ಮುಂದೆ ಸಮಸ್ಯೆಯಾಗಬಹುದು ಅಥವಾ ಬೆಳೆ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬಿತ್ಯಾದಿ ಗೊಂದಲ ರೈತರಿಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ನರೇಂದ್ರಸ್ವಾಮಿ ಅವರೇ ಅಧಿಕಾರಿಗಳ ತಂಡ ಕಟ್ಟಿಕೊಂಡು ಗ್ರಾಮಗಳಿಗೆ ತೆರಳಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಂವಾದಗಳನ್ನು ಆಯೋಜಿಸುವುದರ ಮೂಲಕ ಏನೇ ಗೊಂದಲವಿದ್ದರೂ ಬಗೆಹರಿಸಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ.
ಮುಖ್ಯವಾಗಿ ಬೆಳೆ ಪದ್ಧತಿ, ನೀರಿನ ಸಂರಕ್ಷಣೆ, ಮಾರುಕಟ್ಟೆಯ ವ್ಯವಸ್ಥೆ ತಿಳಿಸಿಕೊಡುತ್ತಿದ್ದಾರೆ. ಈ ಯೋಜನೆಗೆ ಒಳಪಡುವವರು ನೀರು ಬಳಕೆದಾರರ ಸಹಕಾರ ಸಂಘದ ಸಹಯೋಗದೊಂದಿಗೆ ಮುನ್ನಡೆಯಲಿದ್ದಾರೆ. ಈ ರೀತಿ ಪ್ರತಿ ಒಂದು ಸಾವಿರ ಎಕರೆಗೆ ಅನುಗುಣವಾಗಿ ಪ್ರತ್ಯೇಕ ಸಂಘ ರಚಿಸಲಾಗಿದೆ. ಪ್ರಮುಖವಾಗಿ ನೋಡುವುದಾದರೆ ಯೋಜನೆಯಲ್ಲಿ ಸಾಮೂಹಿಕ ಬೆಳೆ ಪದ್ಧತಿ ಅನುಸರಿಸುವುದಾಗಿದೆ. ಗಮನಾರ್ಹ ಅಂಶವೆಂದರೆ ಬೇಡಿಕೆ ಆಧಾರಕ್ಕೆ ತಕ್ಕಂತೆ ಯಾವ ಬೆಳೆ ಹಾಕಬೇಕೆನ್ನುವುದನ್ನು ಸಂಘದಲ್ಲಿ ಬಹುಮತದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದು ಕೂಡ ಆನ್‌ಲೈನ್ ವ್ಯವಸ್ಥೆಯಲ್ಲಿರಲಿದೆ. ಬಳಿಕ ನೀರಿನ ಬಳಕೆ ಮಾಡುವುದರ ಜತೆಗೆ ಯಂತ್ರೋಪಕರಣ ಬಳಕೆಯಿಂದ ಬೆಳೆ ಕಟಾವು, ಮಾರುಕಟ್ಟೆ ವ್ಯವಸ್ಥೆಯೂ ಸಿಗಲಿದೆ. ಬೆಳೆ ಯಾವುದೆಂದು ನಿರ್ಧರಿತವಾದ ಬಳಿಕ ವಿಮೆಗೆ ಒಳಪಡುವುದರಿಂದ ರೈತರಿಗೆ ನಷ್ಟವಾಗುವುದಿಲ್ಲ. ಈ ವಿಮೆ ಮಾಡಿಸಲು ಬ್ಯಾಂಕ್‌ನಿಂದ ಸಾಲ ಸೌಲಭ್ಯ ಒದಗಿಸುವ ಹೇಳಲಾಗಿದೆ. ಸಂಘದ ನಿರ್ವಹಣೆ, ಯಂತ್ರೋಪಕರಣದ ಬಳಕೆ ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ಸ್ಥಳೀಯರೇ ಪಾಲ್ಗೊಳ್ಳುವುದರಿಂದ ಉದ್ಯೋಗಾವಕಾಶವೂ ಸಿಗಲಿದೆ.
ಸಾವಿರಾರೂ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಪೂರಿಗಾಲಿ ಹನಿ ನೀರಾವರಿ ಯೋಜನೆ ಯಶಸ್ವಿಯಾಗಲು ರೈತರ ಸಂಪೂರ್ಣ ಸಹಕಾರ ಅತ್ಯಗತ್ಯ. ಇದನ್ನು ಸದ್ಬಳಕೆ ಮಾಡಿಕೊಂಡರೆ ನಮ್ಮ ರೈತರ ಬದುಕು ಬಂಗಾರವಾಗಲಿದೆ. ಪಿ.ಎಂ.ನರೇಂದ್ರಸ್ವಾಮಿ ಮಳವಳ್ಳಿ ಶಾಸಕ