ಜಿಲ್ಲೆ

ಕೆಆರ್​ಐಡಿಎಲ್​ನಿಂದ ಕಳಪೆ ಕಾಮಗಾರಿ?

ತುಮಕೂರು ಡೆಸ್ಕ್

ಭ್ರಷ್ಟಾಚಾರ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ | ಎರಡೇ ದಿನದಲ್ಲಿ ಕಿತ್ತುಬಂದ ಡಾಂಬರ್​!

ರಾಘವೇಂದ್ರ ದಾಸರಹಳ್ಳಿ ಕೊರಟಗೆರೆ

ಸುಗಮ ಸಂಚಾರಕ್ಕೆಂದು ಲಾಂತರ ರೂ. ವೆಚ್ಚದಲ್ಲಿ ರಸ್ತೆಗೆ ಡಾಂಬರು ಹಾಕಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡ ಎರಡೇ ದಿನಗಳಲ್ಲಿ ಡಾಂಬರು ಕಿತ್ತು ಗುಂಡಿ ಬೀಳುತ್ತಿದೆ.

ಇದು, ಪಟ್ಟಣದ ಹಿಂದುಳಿದ ಪ್ರದೇಶವಾಗಿರುವ ಗಿರಿನಗರದಲ್ಲಿ ಕೆಆರ್​ಐಡಿಎಲ್​ ಅಧೀನದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಅವ್ಯವಸ್ಥೆಯ ಚಿತ್ರಣ.

ಗಿರಿನಗರವನ್ನು ಕೊಳೆಗೇರಿ ಪ್ರದೇಶ ಎಂದು ಗುರುತಿಸಲಾಗಿದ್ದು, ಸ್ಲಂ ಬೋರ್ಡ್​ನಿಂದ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಅದರಂತೆ ಇತ್ತೀಚೆಗಷ್ಟೇ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಮಗಾರಿಗೂ ಮುನ್ನ ಮಾರ್ಗದ ಎರಡೂ ಬದಿಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿರುವುದು ಹಾಗೂ ಕಿತ್ತುಹಾಕಿರುವ ರಸ್ತೆ ತ್ಯಾಜ್ಯವನ್ನು ತೆರವುಗೊಳಿಸದೆ ಡಾಂಬರೀಕರಣ ಮಾಡಲು ಮುಂದಾಗಿದ್ದೇ ಎರಡೇ ದಿನಕ್ಕೆ ಗುಂಡಿಗಳು ಬೀಳಲು ಕಾರಣ ಎನ್ನಲಾಗುತ್ತಿದೆ.

ಪಪಂ ಅನುದಾನದಲ್ಲಿ ರಸ್ತೆ: ಈ ಹಿಂದೆ ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಗಿರಿನಗರದಲ್ಲಿ ವಿವಿಧ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿತ್ತು, ಆದರೆ, ರಸ್ತೆ ಮಾಡಿ ಎರಡ್ಮೂರು ವರ್ಷಗಳಲ್ಲಿ ಹಾಳಾಗಿ ಗುಂಡಿ ಬಿದ್ದಿದ್ದವು. ಪಪಂನಿಂದ ನಿರ್ಮಾಣವಾಗಿದ್ದ ಈ ರಸ್ತೆಯನ್ನು ಕೇವಲ ಮೂರು ವರ್ಷಗಳಲ್ಲಿಯೇ ಕೀಳಲು ಎನ್​ಒಸಿ ನೀಡಲಾಗಿದೆಯೇ?, ಹಾಗಾದರೆ ಪಪಂನಿಂದ ನಡೆಯುವ ಕಾಮಗಾರಿಗಳು ಎಷ್ಟು ಗುಣಮಟ್ಟದಿಂದ ಕೂಡಿವೆ ಎಂಬುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದ್ದು, ಈಗ, ಲ್ಯಾಂಡ್​ ಆರ್ಮಿಯಿಂದ ನಡೆಯುತ್ತಿರುವ ಕಾಮಗಾರಿಯಾದರೂ ಗುಣಮಟ್ಟದಿಂದ ಕೂಡಿರಲಿ ಎಂಬುದು ಸ್ಥಳಿಯರ ಆಗ್ರಹವಾಗಿದೆ.

ಸ್ಪಷ್ಟ ಚಿತ್ರಣ ಇಲ್ಲ

ಸರ್ಕಾರದಿಂದ ಮಂಜೂರಾಗುವ ಯಾವುದೇ ಯೋಜನೆ, ಕಾಮಗಾರಿಯ ಮೊತ್ತ ಸೇರಿ ಪೂರ್ಣ ವಿವರಗಳ ಬಗ್ಗೆ ನಾಮಫಲಕ ನೆಟ್ಟು ನಂತರ ಕಾಮಗಾರಿ ನಡೆಸುವುದು ಗುತ್ತಿಗೆ ಪಡೆದವರು ಮಾಡುವ ಸಾಮಾನ್ಯ ಕೆಲಸ. ಆದರೆ, ಇತ್ತೀಚೆಗೆ ನಡೆಸುತ್ತಿರುವ ಕಾಮಗಾರಿಗಳಲ್ಲಿ ಯಾವುದೇ ಪೂರ್ಣ ವಿವರ ನೀಡುವ ನಾಮಲಕ ಅಳವಡಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಮಗಾರಿಯ ಬಗ್ಗೆ ಸ್ಪಷ್ಟ ಚಿತ್ರಣ, ವಿವರ, ಅನುದಾನದ ಮೊತ್ತ ಯಾವುದೂ ಇಲ್ಲದಿರುವುದರಿಂದ ಅಕ್ರಮದ ಶಂಕೆ ವ್ಯಕ್ತವಾಗುತ್ತಿದೆ.

ಮೂರು ವರ್ಷಗಳ ಹಿಂದೆ ಕೊಳಚೆ ನಿಮೂರ್ಲನೆ ಮಂಡಳಿಯಿಂದ ರಸ್ತೆ ಮಾಡಲಾಗಿತ್ತು. ಆದರೆ ಈ ಬಾರಿ ಗುತ್ತಿಗೆದಾರರು ಉತ್ತಮವಾಗಿದ್ದ ರಸ್ತೆಯನ್ನು ಕಿತ್ತು ಹಾಕಿ ಮತ್ತೆ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಪದೇಪದೆ ಇದೇ ರಸ್ತೆಯನ್ನು ಏಕೆ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಈಗ ಮಾಡಿರುವ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. | ತಿಮ್ಮರಾಜು, ಗಿರಿನಗರ ನಿವಾಸಿ ಕಾಮಗಾರಿ ಈಗ ಪ್ರಾರಂಭವಾಗಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಕಳಪೆಯಾಗದಂತೆ ಕ್ರಮ ವಹಿಸುತ್ತೇನೆ. | ನಂದೀಶ್​ ಪ.ಪಂ, 4 ವಾರ್ಡ್​ ಸದಸ್ಯ ವಕ್ಫ್​ಬೋರ್ಡ್​ ನಿಂದ ನೇರವಾಗಿ ಮುಸ್ಲಿಮರು ಇರುವ ಪ್ರದೇಶಗಳಿಗೆ ಕಾಮಗಾರಿ ಮಾಡಬಹುದಾಗಿತ್ತು. ಈಗ ಪಟ್ಟಣದ 4ನೇ ವಾರ್ಡ್​ನಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಬೇರೆ ಇಂಜಿನಿಯರ್​ ಇದ್ದು, ಸಾರ್ವಜನಿಕರು ನಮಗೆ ಲಿಖಿತ ದೂರು ನೀಡಿದ್ದಲ್ಲಿ, ವಕ್ಫ್​ ಬೋರ್ಡ್​ ನಿಂದ ತನಿಖೆ ನಡೆಸಿ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಲಾಗುವುದು. | ಕೆ.ಎಸ್​.ಉಮೇಶ್​, ಪಪಂ ಮುಖ್ಯಾಧಿಕಾರಿ, ಕೊರಟಗೆರೆ