ಜಿಲ್ಲೆ

ಕಳಪೆ ಬಿತ್ತನೆಬೀಜ ವಿತರಣೆಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಶಾಸಕ

ಹರ್ಷ ನ.ಪುರೋಹಿತ

ಜಗಳೂರು: ತಾಲೂಕಿನ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಬೇಕು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ 2023- 24ನೇ ಸಾಲಿನ ಮುಂಗಾರು ಬಿತ್ತನೆ ಬೀಜಗಳ ವಿತರಣ ಕಾರ್ಯಕ್ಕೆ ಚಾಲನೆ ನೀಡಿ, ಮಾತನಾಡಿದರು.

ಇನ್ನೊಂದು ವಾರದಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶಿಸಲಿದ್ದು, ರೈತರಿಗೆ ಬೇಕಾಗುವ ಬಿತ್ತನೆ ಬೀಜ ಮತ್ತು ಗೊಬ್ಬರ ರೈತರಿಗೆ ಸಕಾಲಕ್ಕೆ ಸಿಗುವಂತೆ ಮುಂಜಾಗ್ರತೆ ವಹಿಸಬೇಕು. ಕಳಪೆ ಬಿತ್ತನೆಬೀಜ ವಿತರಿಸಿ, ರೈತರಿಗೆ ನಷ್ಟವಾದರೆ ಕಠಿಣ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.

ಈಗಾಗಲೇ ಬಿತ್ತನೆಬೀಜ, ರಸಗೊಬ್ಬರಗಳನ್ನು ಕೊರತೆ ಆಗದಂತೆ ನೋಡಿಕೊಳ್ಳಲು ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಸೂಚಿಸಿದ್ದೇನೆ.

ಮಳೆ ಬಂದರೆ ಸಾಕು ಬಿತ್ತನೆ ಮಾಡಲು ರೈತರು ಭೂಮಿಯನ್ನು ಸಿದ್ಧತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ನಿರ್ಲಕ್ಷೃ ವಹಿಸದೇ ಕಟ್ಟೆಚ್ಚರ ವಹಿಸಬೇಕು ಎಂದರು.

ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ಮಾತನಾಡಿ, ಬಿತ್ತನೆ ಬೀಜ ವಿತರಣಾ ಕೇಂದ್ರದಲ್ಲಿ ಮೆಕ್ಕೆಜೋಳ, ರಾಗಿ, ಜೋಳ, ಭತ್ತ, ತೊಗರಿ, ಸೋಯಾಬೀನ್, ಹೆಸರು, ಅಲಸಂದೆ, ಸಜ್ಜೆ, ಸೂರ್ಯಕಾಂತಿ, ನವಣೆ ಮತ್ತು ಸಿರಿಧಾನ್ಯಗಳು ಬಿತ್ತನೆಗೆ ಲಭ್ಯವಿದೆ.

ಕಡ್ಡಾಯವಾಗಿ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಆಧಾರ್ ಕಾರ್ಡ್, ಕಡ್ಡಾಯವಾಗಿ ಪಿಎಂ ಕಿಸಾನ್‌ಗೆ ಇ-ಕೆವೈಸಿ ಮಾಡಿಸಿ ಬಿತ್ತನೆ ಬೀಜ ಪಡೆಬೇಕು ಎಂದು ತಿಳಿಸಿದರು.