ಪಾಂಡವಪುರ : ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿ ತೀರಾ ಕಳಪೆಯಾಗಿದ್ದು, ನಾಲೆಯಲ್ಲಿ ನೀರು ಹರಿಯುವ ಮೊದಲೇ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ ಎಂದು ಹಾರೋಹಳ್ಳಿ ಗ್ರಾಮಸ್ಥರು ಆರೋಪಿಸಿದರು.
ಪಟ್ಟಣದ ಹಾರೋಹಳ್ಳಿಯ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ ಮುಂಭಾಗ ಹಾದು ಹೋಗಿರುವ ವಿಶ್ವೇಶ್ವರಯ್ಯ ನಾಲಾ ಲೈನಿಂಗ್ ಮತ್ತು ತಾಣಗಟ್ಟೆ ಕಾಮಗಾರಿ ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೇವಲ ಮೂರ‌್ನಾಲ್ಕು ಬಾರಿ ಸುರಿದ ಸಾಧಾರಣ ಮಳೆ ನೀರಿಗೆ ನಾಲೆಗೆ ಮಾಡಿರುವ ಲೈನಿಂಗ್ ಕಿತ್ತು ಬಂದಿದೆ. ಇನ್ನೆರಡು ಹದ ಮಳೆಯಾದರೆ ಇಡೀ ಲೈನಿಂಗ್ ವಾಲ್ ಕಿತ್ತು ಬಂದು ನಾಲೆ ನೀರಿನಲ್ಲಿ ತೇಲಿ ಹೋಗುವುದರಲ್ಲಿ ಸಂಶಯವಿಲ್ಲ ಎಂದು ದೂರಿದರು.
ನಾಲಾ ಕಾಮಗಾರಿ ಉದ್ದೇಶಕ್ಕಾಗಿ ಮೂರು ತಿಂಗಳಿನಿಂದ ನಾಲೆಗಳಿಗೆ ನೀರು ಹರಿಸದೆ ರೈತರು ಬೆಳೆ ಬೆಳೆದಿಲ್ಲ. ನಾಲೆ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯ ಕೊನೇ ಭಾಗಕ್ಕೂ ನೀರು ಹರಿದು ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ಭಾವನೆ ರೈತರದ್ದಾಗಿದೆ. ತಮಗೆ ನಷ್ಟ ಸಂಭವಿಸಿದರೂ ಸಹಿಸಿಕೊಂಡು ನಾಲೆ ಕಾಮಗಾರಿಗೆ ಸಹಕರಿಸಿದ್ದಾರೆ. ಆದರೆ ನಾಲೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿ ದ್ರೋಹ ಬಗೆಯುತ್ತಿದ್ದಾರೆ ಎಂದು ಆರೋಪಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 46 ಕಿಮೀ ನಾಲಾ ಆಧುನೀಕರಣ ಕಾಮಗಾರಿಗೆ ಸರ್ಕಾರ ಮೊದಲ ಹಂತದಲ್ಲಿ 2019ರಲ್ಲಿ 330 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. 2024ರಲ್ಲಿ ಹೆಚ್ಚುವರಿಯಾಗಿ 60 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ನೀಡಿದ್ದು, ಒಟ್ಟಾರೆ 390 ಕೋಟಿ ರೂ. ಅನುದಾನದ ಕಾಮಗಾರಿ ಹೊಳೆಯಲ್ಲಿ ಹುಣಸೆಹಣ್ಣು ತೇಯ್ದದಂತೆ ವ್ಯರ್ಥವಾಗುತ್ತಿದೆ. 46 ಕಿಮೀ ಉದ್ದದ ನಾಲಾ ಕಾಮಗಾರಿ ಈಗ ಕೇವಲ 20 ಕಿಮೀ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಶೇ.50 ರಷ್ಟು ಕಾಮಗಾರಿ ನಡೆಯಬೇಕಿದೆ. ಕಾಮಗಾರಿಯ ಆಮೆ ಗತಿ ನೋಡಿದರೆ ರೈತರಿಗೆ ಈ ಹಂಗಾಮು ನೀರು ಸಿಗುವುದಿಲ್ಲ. ಕಾಮಗಾರಿ ನಡೆಯುವ ಹಂತದಲ್ಲೇ ಕಳಪೆ ಕಾಮಗಾರಿಯಿಂದಾಗಿ ನಾಲಾ ಲೈನಿಂಗ್ ವಾಲ್‌ಗಳು ಕುಸಿದುಬಿದ್ದರೆ ಇನ್ನೂ ನಾಲೆಗಳಿಗೆ ನೀರು ಹರಿದು ಮಳೆಗಾಲ ಶುರುವಾದರೆ ಯಾವ ಪರಿಸ್ಥಿತಿ ಇರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಈಗಾಗಲೇ ನಡೆದಿರುವ ಕಾಮಗಾರಿ ಗುಣಮಟ್ಟವನ್ನು ಪರೀಕ್ಷಿಸಿ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿ ಗುಣಮಟ್ಟದ ಕಾಮಗಾರಿಗೆ ನೀರಾವರಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾಮಗಾರಿ ನಡೆಯಲು ಅವಕಾಶ ನೀಡದೆ ಹೋರಾಟದ ಮೂಲಕ ತಡೆಯಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.
ಸತೀಶ್ (ಹರಳಹಳ್ಳಿ ಅಮ್ಮ), ಎಚ್.ಸಿ.ಕೃಷ್ಣೇಗೌಡ ಪಟೇಲ, ಸಾಗರ್, ಕೊನ್ನಾರಿ ಮಂಜ, ರವಿ ಸೆಟ್ಟಪ್ಪ, ಮೋಹನ, ದಿಲೀಪ, ತಿಮ್ಮೇಗೌಡ ಇತರರು ಇದ್ದರು.