ಜಿಲ್ಲೆ

ಕಳಪೆ ಗೊಬ್ಬರ, ಬಿತ್ತನೆ ಬೀಜ ವಿತರಣೆ ಆರೋಪ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿ ವಾತಾವರಣದಲ್ಲಿ ಉಂಟಾಗಿರುವ ತೇವಾಂಶದಿಂದ ತೋಟಗಾರಿಕೆ ಬೆಳೆಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಬೆಳೆ ವಿಮೆ ಪಾವತಿಸಿರುವ ಎಲ್ಲ ಕೈಷಿಕರಿಗೂ ವಿಮಾ ಪರಿಹಾರ ಮೊತ್ತ ಪಾವತಿಸಬೇಕೆಂದು ಆಗ್ರಹಿಸಿ ರೈತರು ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಹೊಸದುರ್ಗ ತಾಲೂಕಿನಲ್ಲಿ ತೆಂಗು ಅಭಿವೃದ್ಧಿ ಯೋಜನೆಯಡಿ ರೈತರಿಗೆ ಗೊಬ್ಬರ, ಕೀಟನಾಶಕ ವಿತರಿಸದೆ ಹಣ ಪಡೆಯಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ವಿತರಿಸಿರುವ ಗೊಬ್ಬರ, ಬಿತ್ತನೆ ಬೀಜ ಹಾಗೂ ಪರಿಕರಗಳು ಬಹಳಷ್ಟು ಕಳಪೆಯಾಗಿವೆ ಎಂದು ಆರೋಪಿಸಿದರು.

ಅಗತ್ಯ ಪರಿಕರಗಳನ್ನು ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ. ನಕಲಿ ದಾಖಲೆ ಸೃಷ್ಟಿಸಿ ಬಿಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಕಾರರು, ತನಿಖೆ ನಡೆಸಿ ತಪ್ಪಿತಸ್ಥ ಕಂಪ ನಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವಾರದೊಳಗೆ ಅಡಕೆ ಬೆಳೆಗೆ ವಿಮೆ ಪರಿಹಾರ ಮೊತ್ತ ಪಾವತಿಸದಿದ್ದರೆ ಕಚೇರಿ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಕೆ.ಟಿ. ತಿಪ್ಪೇಸ್ವಾಮಿ, ರಂಗಸ್ವಾಮಿ, ಹೊಳಲ್ಕೆರೆ ರಂಗಣ್ಣ, ಜಯಣ್ಣ, ವೀರಭದ್ರಪ್ಪ, ಹಿರಿಯೂರು ಸಿದ್ದರಾಮಣ್ಣ, ಸಣ್ಣತಿಮ್ಮಣ್ಣ, ಗಿರೀಶ್, ಚಳ್ಳಕೆರೆ ಶ್ರೀಕಂಠಮೂರ್ತಿ, ತಿಪ್ಪೇಸ್ವಾಮಿ, ಚನ್ನಕೇಶವ, ಹೊಸದುರ್ಗ ರಾಮಣ್ಣ, ಪ್ರಸನ್ನ, ಈರಣ್ಣ, ರಾಮಣ್ಣ, ಮೀಸೆಗೌಡ ಇತರರು ಇದ್ದರು.