ಜಿಲ್ಲೆ

ಪಡಿತರದಲ್ಲಿ ಕಳಪೆ ಜೋಳ ವಿತರಣೆ

Dharwada - Vikram Nadiger

ವಿಕ್ರಮ ನಾಡಿಗೇರ ಧಾರವಾಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಿಸುವ ಪಡಿತರದಲ್ಲಿನ ಜೋಳದ ಗುಣಮಟ್ಟ ಸರಿ ಇಲ್ಲದಿದ್ದರೂ ವಿತರಣೆ ಮಾಡಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಟ್ಟಾಗಿದ್ದಲ್ಲದೆ, ಹುಳುಗಳು ಇರುವ ಕಳಪೆ ಮಟ್ಟದ ಜೋಳ ಹಂಚಿಕೆ ಮಾಡಿರುವುದು ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. 2024ರ ಅಕ್ಟೋಬರ್​ನಿಂದ ಡಿಸೆಂಬರ್​ ತಿಂಗಳಲ್ಲಿ ವಿತರಿಸಿರುವ ಜೋಳ ಹಾಳಾಗಿತ್ತು. ಹುಳುಗಳ ಜತೆಗೆ ಹಿಟ್ಟಾಗಿತ್ತು. ಜೋಳ ಹಿಡಿದರೆ ಸಾಕು ಕೈ ಬಿಳಿಯಾಗುವಂತೆ ಹಿಟ್ಟಾಗಿತ್ತು. ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಣೆ ಸಮಯದಲ್ಲಿ ಪರಿಶೀಲಿಸದೆ ಜೋಳ ಪಡೆದ ಫಲಾನುಭವಿಗಳು ಅದನ್ನು ಬಳಸದೆ ಬಿಸಾಡಿಸಿದ್ದಾರೆ. ಇನ್ನೂ ಕೆಲವರು ದನಗಳಿಗೆ ಆಹಾರವಾಗಿ ಬಳಸಿದ್ದಾರೆ. ರಾಯಚೂರಿನ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಜೋಳವನ್ನು ಧಾರವಾಡಕ್ಕೆ ತರಲಾಗಿದೆ. ಎಷ್ಟು ತಿಂಗಳ ಹಿಂದೆ ಸಂಗ್ರಹಿಸಲಾಗಿತ್ತು? ಸಂಗ್ರಹಿಸಿದ ಧಾನ್ಯದ ಗುಣಮಟ್ಟ? ಹೀಗೆ ಎಲ್ಲ ಆಯಾಮಗಳಲ್ಲಿ ಪರೀಕ್ಷೆ ನಡೆಸದೆ ಅಧಿಕಾರಿಗಳು ತಂದಿದ್ದಾರೆ. ಇಷ್ಟು ಮಾತ್ರವಲ್ಲದೆ ನ್ಯಾಯ ಬೆಲೆ ಅಂಗಡಿಕಾರರು ವಿತರಣೆ ಸಮಯದಲ್ಲಿ ಹಾಳಾಗಿದ್ದನ್ನು ಗಮನಿಸದೆ ವಿತರಣೆ ಮಾಡಿರುವುದೂ ದುರದೃಷ್ಟಕರವೇ ಸರಿ. ಜೋಳದ ಗುಣಮಟ್ಟ ಪರಿಶೀಲಿಸಿದ ಬಳಿಕವೇ ವಿತರಣೆ ಮಾಡಬೇಕು ಎಂದು ಇಲಾಖೆ ಆಯುಕ್ತರು ಈಗಾಗಲೇ ಸೂಚನೆ ನೀಡಿದ್ದಾರೆ. ಆದಾಗ್ಯೂ ಜಿಲ್ಲೆಯ ಅಧಿಕಾರಿಗಳು ಪಡಿತರವನ್ನು ಪರಿಶೀಲಿಸಿಲ್ಲವೇ? ಅಥವಾ ಗೊತ್ತಿದ್ದರೂ ಯಾವುದೋ ಲಾಭಿಗೆ ಮಣಿದು ಕಳಪೆ ಜೋಳ ನೀಡಿದ್ದಾರೆಯೇ? ಎಂಬ ಪ್ರಶ್ನೆ ಜಿಲ್ಲೆ ಜನರಲ್ಲಿ ಇದೀಗ ಮೂಡಿದೆ. ಜಿಲ್ಲೆಯಲ್ಲಿ ತಿಂಗಳಿಗೆ ಸುಮಾರು 30 ಸಾವಿರ ಕ್ವಿಂಟಾಲ್​ ಜೋಳ ಹಂಚಿಕೆಯಾಗುತ್ತದೆ. ಇಷ್ಟು ಪ್ರಮಾಣದ ಜೋಳ ತರುವಾಗ ಅದರ ಗುಣಮಟ್ಟ ಪರೀಕ್ಷಿಸಬೇಕು ಎಂಬ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇಲ್ಲದಿರುವುದು ಬೇಸರದ ಸಂಗತಿ. ನವೆಂವಬರ್​ ತಿಂಗಳಿನಲ್ಲೇ ಕೆಲವರು ದೂರು ನೀಡಿದ್ದರು. ಅದಕ್ಕೂ ಕ್ಯಾರೆ ಎಂದಿರಲಿಲ್ಲ. ಹೀಗಾಗಿ ಫಲಾನುಭವಿಗಳು ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಕಳಪೆ ಮಟ್ಟದ ಜೋಳ ತಂದಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಲ್ಲದೆ, ಪ್ರಸಕ್ತ ತಿಂಗಳಿಂದ ಗುಣಮಟ್ಟದ ಜೋಳ ವಿತರಿಸುವಂತೆ ಜನರು ಆಗ್ರಹಿಸಿದ್ದಾರೆ.

* ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

ರಾಯಚೂರಿನಲ್ಲಿ ಸಂಗ್ರಹಿಸಿಟ್ಟಿದ್ದ ಜೋಳವನ್ನು ಎಲ್ಲ ಜಿಲ್ಲೆಗಳಿಗೆ ನೀಡಲಾಗಿದೆ. ಅಲ್ಲಿ ಸಂಗ್ರಹಿಸಿಟ್ಟ ಜೋಳವನ್ನು 6 ತಿಂಗಳಲ್ಲಿ ವಿಲೇವಾರಿ ಮಾಡಬೇಕಿತ್ತು. ಆದರೆ ತಡವಾದ ಕಾರಣ ಸ್ವಲ್ವ ಹಿಟ್ಟಾಗಿದೆ ಹೊರತು ಹಳುವಾಗಿಲ್ಲ. ಡಿಸೆಂಬರ್​ನಲ್ಲಿ ಧಾರವಾಡದಲ್ಲಿ ಯಾವುದೇ ದೂರುಗಳು ಬಂದಿಲ್ಲ. ಜನವರಿಯಲ್ಲಿ ಜೋಳ ವಿತರಣೆ ಬಂದ್​ ಮಾಡಲಾಗುವುದು.