ಜಿಲ್ಲೆ

ಪಡಿತರದಾರರಿಗೆ ಕಳಪೆ ಜೋಳ ವಿತರಣೆ

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಪಡಿತರ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ಜೋಳ ವಿತರಣೆ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದಾಗ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರ ಸೇರಿ ಜಿಲ್ಲೆಯ ಜನತೆ ಬಹಳಷ್ಟು ಸಂತೋಷ ಪಟ್ಟಿದ್ದರು. ಆದರೀಗ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸುವ ಜೋಳದಲ್ಲಿ ಹುಳು, ಬಿಳಿ ಫೌಡರ್, ಕಸ ಮಿಶ್ರಿತ ಹಾಗೂ ಬುಳುಸು ಬಂದಿರುವುದನ್ನು ನೋಡಿ ಪಡಿತರದಾರರು ‘ಯಾಕಾದರೂ ಇಂಥ ಜೋಳ ವಿತರಿಸುತ್ತಾರಪ್ಪಾ’ ಎನ್ನುವಂತಾಗಿದೆ.

ಇದು ರಾಣೆಬೆನ್ನೂರ ಮಾತ್ರವಲ್ಲದೆ ಜಿಲ್ಲೆಯ ಬಹಳಷ್ಟು ನ್ಯಾಯಾಬೆಲೆ ಅಂಗಡಿಯಲ್ಲಿ ವಿತರಿಸುತ್ತಿರುವ ಜೋಳದ ದುಸ್ಥಿತಿಯಾಗಿದೆ. ಹುಳು, ಫೌಡರ್, ಹುಸಿ ಹಾಗೂ ಬುಳುಸು ನೋಡಿದರೆ ದನಗಳು ಕೂಡ ಇಂಥ ಜೋಳ ತಿನ್ನುವುದಿಲ್ಲ ಎಂದು ಜನತೆ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

ಅಧಿಕಾರಿಗಳ ವಿರುದ್ಧ ಆಕ್ರೋಶ

ಸರ್ಕಾರ ಜೋಳ ವಿತರಣೆಗೂ ಮುನ್ನ ಪರಿಶೀಲಿಸಬೇಕು. ಸ್ವಚ್ಛವಾಗಿಲ್ಲ ಎನ್ನುವುದಾದರೆ ಅವುಗಳನ್ನು ಸ್ವಚ್ಛಗೊಳಿಸಿ ಪಡಿತರದಾರರಿಗೆ ವಿತರಣೆ ಮಾಡಬೇಕು ಎಂದು ಸೂಚಿಸಿದೆ. ಆದರೆ, ಅಧಿಕಾರಿಗಳು ಮಾತ್ರ ‘ಜೋಳದ ಮೂಟ್ಟೆ ಬಂತಾ, ವಿತರಿಸಿದ್ರಾ, ಮುಗಿತು’ ಎನ್ನುವ ಅಸಡ್ಡೆ ಅನುಸರಿಸುತ್ತಿದ್ದಾರೆ.

ನ್ಯಾಯಬೆಲೆ ಅಂಗಡಿಕಾರರನ್ನು ಕೇಳಿದರೆ, ಸರ್ಕಾರ ಏನು ಕೊಟ್ಟಿದೆಯೋ, ಅದನ್ನು ನಾವು ಕೊಡುತ್ತಿದ್ದೇವೆ ಅಷ್ಟೇ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸುತ್ತಿದ್ದಾರೆ. ಅಧಿಕಾರಿಗಳು ಕೆಎಫ್​ಸಿಎಸ್​ಸಿ ಗೋದಾಮಿನಿಂದ ಸರಿಯಾಗಿ ಶೇಖರಣೆ ಮಾಡಿಕೊಂಡು ಸರಾಸರಿ ಗುಣಮಟ್ಟ ಪರೀಕ್ಷಿಸಿ ವಿತರಣೆ ಮಾಡಬೇಕು. ಆದರೆ, ಅಧಿಕಾರಿಗಳು ಸರಿಯಾಗಿ ಪರಿಶೀಲಿಸುತ್ತಿಲ್ಲ. ಹೀಗಾಗಿ ಪಲಾನುಭವಿಗಳು ಕಳಪೆ ಜೋಳ ಪಡೆಯುವುದು ಅನಿವಾರ್ಯವಾಗಿದೆ.

ವಿತರಣೆಯೂ ವಿಳಂಬ

ಸರ್ಕಾರ ಕಳುಹಿಸಿದ ಆಹಾರ ಧಾನ್ಯ ಪ್ರತಿ ತಿಂಗಳು 10ನೇ ತಾರೀಖಿನೊಳಗೆ ವಿತರಿಸಬೇಕು. ಆದರೆ, ಇಲ್ಲಿ ತಿಂಗಳ ಕೊನೆಯ ವಾರದಲ್ಲಿ ವಿತರಿಸಲಾಗುತ್ತಿದೆ. ಏಕೆ ಎಂಬ ಪ್ರಶ್ನೆಗೆ ನ್ಯಾಯಬೆಲೆ ಅಂಗಡಿಕಾರರಲ್ಲಿ ಉತ್ತರವಿಲ್ಲ. ತಾಲೂಕಿನಲ್ಲಿ ಡಿ. 27ರವರೆಗೂ ಪಡಿತರ ವಿತರಿಸಲಾಗಿದೆ. ಮನೆಗೆ ತಂದು ಜೋಳ ಪರಿಶೀಲಿಸಿದರೆ ಹುಳು ಹತ್ತಿರುವುದು, ಬುಳುಸು ಬಂದಿರುವುದು ಕಂಡು ಬಂದಿದೆ. ಜೋಳ ತೊಳೆದು, ಸ್ವಚ್ಛಗೊಳಿಸಲು ಆಗದ ಸ್ಥಿತಿಯಲ್ಲಿವೆ. ಇಂಥ ಜೋಳ ತಿಂದರೆ ರೋಗ ಗ್ಯಾರಂಟಿ ಎನ್ನುವ ಪರಿಸ್ಥಿತಿ ಎದುರಾಗಿದೆ.

ಆದ್ದರಿಂದ ಆಹಾರ ಇಲಾಖೆಯ ಅಧಿಕಾರಿಗಳು ಕೊಂಚ ಗಮನ ಹರಿಸಿ ಬಡವರಿಗೆ ಪಡಿತರ ಸರಿಯಾಗಿ ಹಾಗೂ ಗುಣಮಟ್ಟದ ಪಡಿತರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜೋಳ ವಿತರಣೆ ಮಾಡುವ ಮುನ್ನ ಅಂಗಡಿಕಾರರು ಪರಿಶೀಲಿಸಬೇಕು. ಕೆಟ್ಟಿದ್ದರೆ ವಾಪಸ್ ಕೊಡಬೇಕು ಎಂದು ನ್ಯಾಯಬೆಲೆ ಅಂಗಡಿಕಾರರಿಗೆ ಈಗಾಗಲೇ ತಿಳಿಸಲಾಗಿದೆ. ಅಲ್ಲದೆ, ಜೋಳ ವಿತರಣೆಗೆ ಮುನ್ನ ಸ್ವಚ್ಛಗೊಳಿಸಿಯೇ ನೀಡಲಾಗುತ್ತಿದೆ. ಆದರೂ ಸಮಸ್ಯೆ ಆಗಿರುವ ನ್ಯಾಯಬೆಲೆ ಅಂಗಡಿಗೆ ಬಂದಿರುವ ಜೋಳ ಪರಿಶೀಲಿಸಿ ಬದಲಾಯಿಸಲಾಗುವುದು. | ಉಮೇಶ ಸುರಣಗಿ, ತಾಲೂಕು ಆಹಾರ ನಿರೀಕ್ಷಕ, ರಾಣೆಬೆನ್ನೂರ ಸರ್ಕಾರ ಕಳಪೆ ಜೋಳ ವಿತರಣೆ ಮಾಡಿ. ಬಡವರ ಜೀವದ ಜತೆ ಆಟವಾಡುತ್ತಿದೆ. ಈಗ ಕೊಟ್ಟಿರುವ ಜೋಳ ಬಳಸಿದರೆ ಅನಾರೋಗ್ಯಕ್ಕೆ ಒಳಗಾಗುವುದು ಗ್ಯಾರಂಟಿ. ಗುಣಮಟ್ಟದ ಜೋಳ ವಿತರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ನಡೆಸಲಾಗುವುದು. | ರವೀಂದ್ರಗೌಡ ಪಾಟೀಲ, ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ, ರಾಣೆಬೆನ್ನೂರ