ಮಡಿಕೇರಿ: ಸಿದ್ದಾಪುರದ ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಘಟ್ಟದಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ನಲಿಕಲಿ ಕೊಠಡಿಯನ್ನು ಸ್ಥಳೀಯ ಬೆಳಗಾರ ಕೀತಿಯಂಡ ವಿವೇಕ್ ಸೋಮವಾರ ಉದ್ಘಾಟಿಸಿದರು.
ಚೆನ್ನಯ್ಯನಕೋಟೆ ಕ್ಲಸ್ಟರ್ ಅಧಿಕಾರಿ ಕೇಶವಮೂರ್ತಿ ಮಾತನಾಡಿ, ಘಟ್ಟದಳ ಶಾಲೆಯಲ್ಲಿ ನಲಿಕಲಿ ಕೊಠಡಿ ಪ್ರಾರಂಭಿಸಲಾಗಿದೆ. ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಲಸ್ಟರ್ ಮತ್ತು ನಲಿ ಕಲಿ ಸಂಪನ್ಮೂಲ ವ್ಯಕ್ತಿ ಕೆ.ಕೆ. ಸುಶಾ ಮಾತನಾಡಿ ನಲಿ-ಕಲಿ ವಿಧಾನವು ಮಕ್ಕಳಿಗೆ ಸಂತಸದಾಯಕವಾಗಿದೆ. ಇದು ಚಟುವಟುಕೆ ಆಧಾರಿತ ಕಲಿಕಾ ವಿಧಾನವಾಗಿದ್ದು, ಸ್ವ-ಕಲಿಕೆ ಹಾಗೂ ಸ್ವ-ವೇಗದ ಕಲಿಕೆಗೆ ಸಹಾಯಕವಾಗಿರುತ್ತದೆ. ಶಾಲೆಯಲ್ಲಿ ವಿನೂತನವಾಗಿ ಕೊಠಡಿಯನ್ನ ಅಲಂಕರಿಸಲಾಗಿದ್ದು, ಮಕ್ಕಳ ಕಲಿಕೆಗೆ ಪೂರಕ ವಾತಾವರಣವಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಮಾತನಾಡಿ, ಇಲಾಖೆಯ ನಿರ್ದೇಶನದಂತೆ ಶಾಲಾ ಕೊಠಡಿಯಲ್ಲಿ ನಲಿಕಲಿ ಪ್ರಾರಂಭಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಸ್ಥಳೀಯರಾದ ದಂಬೆಕೋಡಿ ಉಮೇಶ್, ಚೆನ್ನಯ್ಯನ ಕೋಟೆ ಶಾಲೆಯ ಮುಖ್ಯ ಶಿಕ್ಷಕಿ ರಾಜಮ್ಮ, ಹುಂಡಿ ಶಾಲೆಯ ಮುಖ್ಯ ಶಿಕ್ಷಕಿ ಶೈಲಾ, ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಯ್ಯ, ಅಂಬೇಡ್ಕರ್ ಜಿಲ್ಲಾ ಅಧ್ಯಕ್ಷ ಸತೀಶ್, ಶಿಕ್ಷಕರಾದ ಶಕುಂತಲಾ, ಸೋನಿ, ಅಂಗನವಾಡಿ ಶಿಕ್ಷಕಿ ಆಶಾ, ಕಲಾವಿದ ಬಾವ ಮಾಲ್ದಾರೆ ಸೇರಿದಂತೆ ಮತ್ತಿತರರು ಇದ್ದರು.