ಜಿಲ್ಲೆ

ಶಿಕ್ಷಣ ಸಚಿವರ ಜತೆ ಪೊನ್ನಣ್ಣ ಸಭೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗು ಜಿಲ್ಲಾ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲಾ ಕಾಲೇಜುಗಳ ಮೂಲಸೌಕರ್ಯ ಮತ್ತು ಬೇಡಿಕೆಗಳ ಕುರಿತು ಶಾಲಾ ಶಿಕ್ಷಣ ಸಚಿವರ ಜತೆ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಮಂಗಳವಾರ ಸಭೆ ನಡೆಸಿದರು. ಬೆಳಗಾವಿ ವಿಧಾನಸೌಧದ ಸಚಿವರ ಕೊಠಡಿಯಲ್ಲಿ ಈ ಸಭೆ ನಡೆಸಲಾಯಿತು.

ಅನುದಾನಿತ ಕಾಲೇಜುಗಳಲ್ಲಿ ತರಗತಿವಾರು ಕನಿಷ್ಠ 40 ವಿದ್ಯಾರ್ಥಿಗಳನ್ನು ನಿಗದಿಪಡಿಸಿದ್ದು ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು ಕನಿಷ್ಠ 40 ವಿದ್ಯಾರ್ಥಿಗಳ ಸಂಖ್ಯೆಯನ್ನು 20 ವಿದ್ಯಾರ್ಥಿಗಳಿಗೆ ಇಳಿಸಬೇಕು, ಉಪನ್ಯಾಸಕರ ವೇತನವನ್ನು ತಡೆಹಿಡಿಯದೆ ವೇತನ ಪಾವತಿಸಬೇಕು. ಪ್ರಜಾ ಪ್ರತಿನಿಧಿ ಕಾಯ್ದೆಯ ತಿದ್ದುಪಡಿ ಅನ್ವಯ ಮಲೆನಾಡು ಜಿಲ್ಲೆಗಳಿಗೆ ರಿಯಾಯಿತಿಯನ್ನು ನೀಡಲಾಗಿದೆ. ಅದೇ ರೀತಿ ಕೊಡಗು ಮತ್ತು ಮಲೆನಾಡು ಜಿಲ್ಲೆಗಳನ್ನು ವಿಶೇಷವಾಗಿ ಪರಿಗಣಿಸಬೇಕು. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೊಡವ ಜಾತಿಯನ್ನು ಕೊಡವ ಎಂದು ನಮೂದಿಸಿ ಅಧಿಸೂಚನೆ ಹೊರಡಿಸಬೇಕು.

ಸಾಂದೀಪನಿ ವಿದ್ಯಾಪೀಠ ಶಾಲೆ, ಮಡಿಕೇರಿ ತಾಲೂಕು ಮೇಕೇರಿ ಗ್ರಾಮದ ಸರ್ವೆ ನಂಬರ್ 99/2 ಜಾಗದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಮತ್ತು ಪಂಚಾಯತ್ ಹೆಸರಿಗೆ ಮಂಜೂರು, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಮೂಲಸೌಕರ್ಯ ಮತ್ತು ಅನುದಾನ, ಮಡಿಕೇರಿ ತಾಲೂಕು ಕೊಯನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಿತು. ಈ ವಿಷಯಗಳ ಬಗ್ಗೆ ವಿಶೇಷವಾಗಿ ಆದ್ಯತೆ ನೀಡಿ ಕ್ರಮವಹಿಸಲಾಗುವುದೆಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು ಈ ಸಂದರ್ಭದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳು ಇದ್ದರು.