ಮಡಿಕೇರಿ:
ಯುವ ಸಮೂಹ ಹಾದಿ ತಪ್ಪುವುದನ್ನು ತಪ್ಪಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ಆಯೋಜಿಸಿದ್ದ ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಹಾಗೂ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಕ್ರೀಡಾಕೂಟಗಳು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವುದಲ್ಲದೆ ಉತ್ತಮ ಬದುಕು ಕಟ್ಟಿಕೊಟ್ಟಿವೆ. ಕ್ರೀಡೆಗಳು ಯುವ ಸಮೂಹವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುತ್ತವೆ ಮತ್ತು ಆರೋಗ್ಯವನ್ನು ಕಾಪಾಡುತ್ತದೆ. ಹೆಚ್ಚು ಹೆಚ್ಚು ಕ್ರೀಡಾಕೂಟಗಳು ನಡೆಯುವುದರಿಂದ ಕೊಡಗಿನ ಆಟಗಾರರಿಗೆ ರಾಜ್ಯ ಮತ್ತು ರಾಷ್ಟçಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸಹಕಾರಿಯಾಗುತ್ತದೆ.
ಜನಪ್ರಿಯ ಕ್ರೀಡೆಯಾಗಿರುವ ಕ್ರಿಕೆಟ್ ಗೆ ಜಿಲ್ಲೆಯಲ್ಲಿ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹ, ಕೂರ್ಗ್ ಕ್ರಿಕೆಟ್ ಫೌಂಡೇಶನ್ ಯುವ ಸಮೂಹವನ್ನು ಉತ್ತೇಜಿಸಲು ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಪರಿಶ್ರಮದಿಂದ ಆಯೋಜಿಸಿದೆ. ಈ ಬಾರಿಯ ಸೀಸನ್-2 ರಲ್ಲಿ ದೊಡ್ಡ ಸಂಖ್ಯೆಯಲ್ಲಿ ಆಟಗಾರರು ಪಾಲ್ಗೊಂಡಿರುವುದು ಶ್ಲಾಘನೀಯ. ಕೂರ್ಗ್ ಕ್ರಿಕೆಟ್ ಫೌಂಡೇಶನ್ ನ ಪ್ರಯತ್ನಕ್ಕೆ ನನ್ನ ಸಂಪೂರ್ಣ ಪ್ರೋತ್ಸಾಹವಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂರ್ಗ್ ಕ್ರಿಕೆಟ್ ಫೌಂಡೇಶನ್ ಅಧ್ಯಕ್ಷ ಪೊರುಕೊಂಡ ಸುನಿಲ್, ಕೊಡಗಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸುವ ಮತ್ತು ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ನಡೆಸಿಕೊಂಡು ಬರಲಾಗುತ್ತಿದೆ. ಲೆದರ್ ಬಾಲ್ ಕ್ರಿಕೆಟ್‌ಗೆ ಜಿಲ್ಲೆಯ ಯುವ ಸಮೂಹವ ಸೆಳೆಯುವುದು ನಮ್ಮ ಕನಸಾಗಿತ್ತು, ಅದು ನನಸಾಗುತ್ತಿದೆ. ಇಲ್ಲಿಯವರೆಗೆ ಕೊಡವರಿಗೆ ಮಾತ್ರ ಸೀಮಿತವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ, ಜನಾಂಗದವರನ್ನು ಒಗ್ಗೂಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಪಂದ್ಯಾವಳಿ ನಡೆಸುವುದಾಗಿ ತಿಳಿಸಿದರು.
ಮಾಜಿ ಹಾಕಿ ಒಲಿಂಪಿಯನ್ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ ದಾನಿಗಳ ಸಹಕಾರವಿದ್ದರೆ ಮಾತ್ರ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯ, ಇದರೊಂದಿಗೆ ಯುವ ಸಮೂಹಕ್ಕೆ ಪ್ರೋತ್ಸಾಹದ ಅಗತ್ಯವೂ ಇದೆ. ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತಷ್ಟು ನಡೆದು ಜಿಲ್ಲೆಯ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಆಡುವಂತ್ತಾಗಲಿ ಎಂದು ಹೇಳಿದರು.
ರಾಜ್ಯ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಶನ್ ಅಪ್ಪಚ್ಚು ಮಾತನಾಡಿ ಕೊಡಗಿನಲ್ಲಿ ಕ್ರೀಡಾ ಸುಗ್ಗಿಯೇ ನಡೆಯುತ್ತಿದೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಮತ್ತು ಸಹಕಾರ ದೊರೆಯುತ್ತಿದೆ ಎಂದರು.
ಕೂರ್ಗ್ ಕ್ರಿಕೆಟ್ ಫೌಂಡೇಶನ್ ಮುಖ್ಯ ಮಾರ್ಗದರ್ಶಕ ಚೇರಂಡ ಕಿಶನ್ ಮಾದಪ್ಪ ಮಾತನಾಡಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಆಯೋಜನೆ ಸಾಧಾರಣ ಕಾರ್ಯವಲ್ಲ, ಇದರ ಹಿಂದೆ ಸಮಾನ ಮನಸ್ಕರ ಕನಸು ಮತ್ತು ಶ್ರಮವಿದೆ. ಕೊಡಗಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸವನ್ನು ಕೂರ್ಗ್ ಕ್ರಿಕೆಟ್ ಫೌಂಡೇಶನ್ ಮಾಡಿದೆ ಎಂದು ಹೇಳಿದರು.
ಕ್ಯೂರೆಮಾರ್ವೆಲ್ ನಿರ್ದೇಶಕಿ ಪಾಲಚಂಡ ಪೂಜಿತಾ ಉತ್ತಪ್ಪ ಮಾತನಾಡಿದರು.
ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ, ಉದ್ಯಮಿ ಕುಪ್ಪಂಡ ಚಿಣ್ಣಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುಮ್ಮಟ್ಟೀರ ಕಿಲನ್ ಗಣಪತಿ, ಕೂರ್ಗ್ ಕ್ರಿಕೆಟ್ ಫೌಂಡೇಶನ್ ಉಪಾಧ್ಯಕ್ಷ ಪಾಲಚಂಡ ಜಗನ್ ಉತ್ತಪ್ಪ, ಪಂದ್ಯಾವಳಿ ಸಂಚಾಲಕ ಚಂಡೀರ ರಚನ್ ಚಿಣ್ಣಪ್ಪ, ವ್ಯವಸ್ಥಾಪಕ ಚೆರುಮಂದAಡ ಸೋಮಣ್ಣ, ನಿರ್ದೇಶಕರಾದ ಮಡ್ಲಂಡ ದರ್ಶನ್ ಪೆಮ್ಮಯ್ಯ, ಕೀತಿಯಂಡ ಗಣಪತಿ, ಅಣ್ಣಳಮಾಡ ರಾಯ್ ಚಿಣ್ಣಪ್ಪ, ಕುಲ್ಲೇಟಿರ ಶಾಂತ ಕಾಳಪ್ಪ, ಬಲ್ಲಂಡ ರೇಣ ಮತ್ತಿತರರು ಉಪಸ್ಥಿತರಿದ್ದರು.