ಜಿಲ್ಲೆ

ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಾರದ ಹೊಸ ತಾಲೂಕು

reportermys

ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ ಕೆ.ಎಸ್. ನಾಗೇಶ್, ೀಣಿಕೊಪ್ಪ/ ಕುಶಾಲನಗರ

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಕೊಡಗು ಜಿಲ್ಲೆಯಲ್ಲಿ ಎರಡು ಹೊಸ ತಾಲೂಕು ಘೋಷಣೆ ಮಾಡಿದರು. ವಿರಾಜಪೇಟೆಯಿಂದ ಪೊನ್ನಂಪೇಟೆ ಹಾಗೂ ಸೋಮವಾರಪೇಟೆಯಿಂದ ಕುಶಾಲನಗರ ತಾಲೂಕು ಅಸ್ತಿತ್ವಕ್ಕೆ ಬಂದಿದೆ. ಹೊಸ ತಾಲೂಕು ಘೋಷಣೆಯಾಗಿ ಎರಡು ವರ್ಷ ಕಳೆದಿದ್ದರೂ ಪೂರ್ಣ ಪ್ರಮಾಣದಲ್ಲಿ ತಾಲೂಕು ಆಡಳಿತ ಕಾರ್ಯಾರಂಭಗೊಂಡಿಲ್ಲ.

ಎರಡು ವರ್ಷ ಕಳೆದರೂ ಸೋಮವಾರಪೇಟೆ, ವಿರಾಜಪೇಟೆ ತಾಲೂಕು ಕಚೇರಿಗೆ ಓಡಾಡುವುದು ಮಾತ್ರ ತಪ್ಪಿಲ್ಲ. ಹೊಸ ತಾಲೂಕಿಗೆ ತಹಸೀಲ್ದಾರ್ ನೇಮಕವಾಗಿದ್ದಾರೆ. ಇವರೊಂದಿಗೆ ಕೆಲವು ಸಿಬ್ಬಂದಿ ಇದ್ದಾರೆ. ಆದರೆ, ಒಂದು ತಾಲೂಕಿನಲ್ಲಿ ೨೮ ಇಲಾಖೆ ಕಾರ್ಯನಿರ್ವ ಹಿಸಿದರೆ ಮಾತ್ರ ಸಂಪೂರ್ಣವಾದ ತಾಲೂಕು ರಚನೆಯಾಗುತ್ತದೆ.

ಪೊನ್ನಂಪೇಟೆ ತಾಲೂಕಿಗೆ ೨೪ ಗ್ರಾಮ ಲೆಕ್ಕಿಗರ ಹುದ್ದೆಯಲ್ಲಿ ೮ ಹುದ್ದೆ ತುಂಬಿದೆ. ಉಳಿದ ಹುದ್ದೆ ಭರ್ತಿಗೆ ಜಿಲ್ಲಾಧಿಕಾರಿ ಮುಂದಾಗಿದ್ದ ಸಂದರ್ಭ ಅವರಲ್ಲಿದ್ದ ಅಧಿಕಾರ ತೆರವುಗೊಳಿಸಲಾಗಿದೆ. ಅವರ ಅಧಿಕಾರವಧಿಯಲ್ಲಿದ್ದ ಸಂದರ್ಭ ನಡೆದ ಆಯ್ಕೆ ಪ್ರಕ್ರಿಯೆ ಭರ್ತಿಗೆ ಜಿಲ್ಲಾಧಿಕಾರಿ ಪ್ರಯತ್ನ ಪಡುತ್ತಿದ್ದು, ಶೀಘ್ರ ನೇಮಕಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ ಪೊನ್ನಂಪೇಟೆ ತಹಸೀಲ್ದಾರ್ ಎನ್.ಎಸ್. ಪ್ರಶಾಂತ್.

ಗ್ರೇಡ್-೨ ತಹಸೀಲ್ದಾರ್, ಆರ್‌ಆರ್‌ಟಿ ಶಿರಸ್ತೇದಾರ್, ಚುನಾವಣಾ ಶಿರಸ್ತೇದಾರ್, ಆಹಾರ ಶಿರಸ್ತೇದಾರ್, ಆಹಾರ ನಿರೀಕ್ಷಕ, ಸಾಮಾಜಿಕ ಭದ್ರತೆ ಶಿರಸ್ತೇದಾರ್, ಕಚೇರಿ ಆರ್‌ಐ, ದ್ವಿತೀಯ ದರ್ಜೆ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಬೆರಳಚ್ಚುಗಾರರು, ವೃತ್ತಗಳಿಗೆ ೯ ಗ್ರಾಮಲೆಕ್ಕಿಗರು, ಭೂಮಿ ಶಾಖೆಗೆ ೪ ಗ್ರಾಮ ಲೆಕ್ಕಿಗರು, ೧೦ ಡಿ ಗ್ರೂಪ್ ನೌಕರರು ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಮಿ, ಸರ್ವೇ, ಆಹಾರ, ಅಭಿಲೇಖಾಲಯ, ಜನನ- ಮರಣ ಶಾಖೆಗಳು ತಾಲೂಕಿಗೆ ಸ್ಥಳಾಂತರವಾಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮನೆ ನಿವೇಶನಕ್ಕೆ ಭೂಪರಿವರ್ತನೆ ಮಾಡಲು ೪೦೦ ಅರ್ಜಿ ವಿಲೇವಾರಿಗೆ ಬಾಕಿ ಇದೆ. ೫೭ ಸಿ ಸಾಗುವಳಿ ಚೀಟಿಗಾಗಿ ದಿನಂಪ್ರತಿ ೧೦೦ ಅರ್ಜಿ ಸಲ್ಲಿಕೆಯಾಗುತ್ತಿದೆ. ಆರ್‌ಟಿಸಿ/ ಎಂಆರ್ ಕೇಂದ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪಾತ್ರಗಳ ವಿತರಣೆಗಾಗಿ ಪ್ರತ್ಯೇಕ ಕೊಠಡಿ ಅವಶ್ಯವಿದೆ. ಒಂದೇ ಕೊಠಡಿಯಲ್ಲಿ ಎಲ್ಲಾ ಕೆಲಸಒಬ್ಬರೇ ಮಾಡುತ್ತಿರುವುದರಿಂದ
ಒತ್ತಡ ಹೆಚ್ಚಾಗಿದೆ ಮತ್ತು ಸಾರ್ವಜನಿಕರಿಗೂ ಅನಾನುಕೂಲವಾಗಿದೆ.

ಜಿಲ್ಲೆಯ ಬೇರೆ ತಾಲೂಕಿನಲ್ಲಿ ಈ ಸೌಲಭ್ಯವನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕುಶಾಲನಗರದಲ್ಲಿ ಮಾತ್ರ ಒಂದೇ ಕೊಠಡಿಯಲ್ಲಿ ಕೆಲಸ ಮಾಡುತ್ತಿರುವುದು. ನೂತನ ತಾಲೂಕಿನ ರೈತರ ಉಪಯೋಗಕ್ಕಾಗಿ ಇರುವ ಭೂಮಿ ಕೇಂದ್ರ ಸ್ಥಾಪಿಸಲು ರೈತರು ಕೇಳಿಕೊಂಡರು ಆಡಳಿತದಲ್ಲಿ ಇರುವವರು ಎಚ್ಚೆತ್ತುಕೊಂಡಿಲ್ಲ ಎನ್ನುವ ಬೇಸರವನ್ನು ಕಣಿವೆಯ ರೈತ ಬಸವಣ್ಣ ಹೊರಹಾಕಿದ್ದಾರೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕಿನ ಸ್ಥಿತಿಗತಿ ಕುರಿತಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

**
ಕುಶಾಲನಗರ ತಾಲೂಕು ರಚನೆಯಾಗಿ ವರ್ಷಗಳು ಕಳೆದರೂ ತಾಲೂಕಿಗೆ ಬೇಕಾದ ಕಚೇರಿ ಆಗಿಲ್ಲ. ತಾಲೂಕು ಶಿಕ್ಷಣಾಧಿಕಾರಿ,
ತಾಲೂಕು ಪಂಚಾಯಿತಿ, ಆಡಳಿತ ಭವನ ಸೇರಿದ್ದಂತೆ ಹಲವು ಕಚೇರಿಗಳು ಈಗಾಗಲೇ ಕಾರ್ಯಾರಂಭ ಮಾಡಬೇಕಿತ್ತು. ವಿಳಂಬವಾಗುತ್ತಿ
ರುವುದು ಕುಶಾಲನಗರ ತಾಲೂಕು ಅಭಿವೃದ್ಧಿ ದೃಷ್ಟಿಯಿಂದ ಸರಿಯಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಎನ್. ಸುಧಾ ದೇವ್, ಗೃಹಿಣಿ, ಕುಶಾಲನಗರ.

**
ಧಮ್ಮ್ ಇದ್ದರೆ, ತಾಕತ್ತಿದ್ದರೆ ೨೦೨೩ ರ ಬಜೆಟ್ನಲ್ಲಿ ಕ್ಷೇತ್ರದ ಜನಪ್ರತಿನಿಧಿ ಕುಶಾಲನಗರ ತಾಲೂಕು ಆಡಳಿತ ಭವನಕ್ಕೆ ಅನುದಾನ ಬಿಡುಗಡೆ ಮಾಡಿಸಲಿ. ಎಚ್.ಡಿ. ಕುಮಾರಸ್ವಾಮಿ ಮಾಡಿರುವುದನ್ನು ನಾನು ಮಾಡಿದೆ ಎಂದು ಸುಳ್ಳು ಹೇಳುವವರು ವಿಶೇಷ ಅನುದಾನ ತರಲು ಇಷ್ಟು ವರ್ಷ ಬೇಕಾ. ಬೇರೆಯವರು ಮಾಡಿರುವುದನ್ನು ತಾನು ಮಾಡಿದೆ ಎಂದು ಜಂಬ ಹೊಡೆಯುವುದನ್ನು ಬಿಟ್ಟು, ಅಭಿವೃದ್ಧಿ ಮಾಡಿ ತೋರಿಸಲಿ. ವಿ.ಪಿ.ಶಶಿಧರ್, ಅಧ್ಯಕ್ಷರು, ಕುಶಾಲನಗರ ತಾಲೂಕು ಹೋರಾಟ ಸಮಿತಿ.

**
ನೂತನ ತಾಲೂಕಿನ ಆಡಳಿತ ಭವನಕ್ಕಾಗಿ ನಿವೇಶನ ಗುರುತು ಮಾಡಲಾಗಿದೆ. ಅದಕ್ಕೆ ಬೇಕಾದ ನಕ್ಷೆ ಮತ್ತು ಅಂದಾಜು ಪಟ್ಟಿ ಜಿಲ್ಲಾಧಿಕಾರಿ ವಿಶೇಷ ಮುತುವರ್ಜಿಯಿಂದ ಸಿದ್ಧವಾಗುತ್ತಿದೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ತಾಲೂಕು ಆಡಳಿತ ವ್ಯವಸ್ಥೆ ಸಂಪೂರ್ಣ ಅನುಷ್ಠಾನಕ್ಕಾಗಿ ಎಲ್ಲಾ ತರಹದ ಪ್ರಾಥಮಿಕ ಹಂತದ ಕೆಲಸ ಪ್ರಗತಿಯಲ್ಲಿದೆ. ಟಿ.ಎಂ. ಪ್ರಕಾಶ್,
ತಹಸೀಲ್ದಾರ್, ಕುಶಾಲನಗರ.

**
ಕಾವೇರಿ ತಾಲೂಕು ರಚನೆಗೆ ಒತ್ತಾಯಿಸಿ ಹೋರಾಟ ಮಾಡಿ, ನಮ್ಮ ಪ್ರಭಾವ ಬಳಸಿ ತಾಲೂಕು ಮಾಡಿಸಿದ್ದು ನಾವು. ಆದರೆ, ಕ್ಷೇತ್ರದ ಜನಪ್ರತಿನಿಧಿ ನಾನೇ ತಾಲೂಕು ರಚನೆ ಮಾಡಿಸಿದ್ದೆಂದು ಸುಳ್ಳು ಹೇಳಿ ನಗೆಪಾಟಿಲಗೆ ಗುರಿಯಾಗಿದ್ದಾರೆ. ಕುಶಾಲನಗರ ವ್ಯಾಪ್ತಿಗೆ ಜನಪ್ರತಿನಿಧಿಯ ಕೊಡುಗೆ ಏನೆಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಕೆ.ಪಿ.ಚಂದ್ರಕಲಾ, ಮಾಜಿ ಅಧ್ಯಕ್ಷೆ, ಕೊಡಗು ಜಿಲ್ಲಾ ಪಂಚಾಯಿತಿ. (

**
ಕುಶಾಲನಗರ ಕೇಂದ್ರವಾಗಿಸಿಕೊಂಡು ಹೊಸ ತಾಲೂಕು ರಚನೆಯಾಗಿದ್ದು, ಹಲವು ಕಚೇರಿ ಕಾರ್ಯಾರಂಭಿಸಿವೆ. ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಬೇಕಾಗಿದೆ. ಮಿನಿ ವಿಧಾನಸೌಧ, ಆಸ್ಪತ್ರೆ ಮೇಲ್ಧರ್ಜೆಗೇರಿಸುವ ಪ್ರಕ್ರಿಯೆಗೆ ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸಿದೆ. ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಕುಶಾಲನಗರ ತಾಲೂಕು ಅಭಿವೃದ್ಧಿಗೆ ಕ್ಷೇತ್ರದ ಶಾಸಕರ ಪ್ರಯತ್ನ ನಿರಂತರವಾಗಿದೆ. ಕೆ.ಜಿ. ಮನು, ಬಿಜೆಪಿ ಮಂಡಲ ವಕ್ತಾರ, ಕುಶಾಲನಗರ.

**
ಪೊನ್ನಂಪೇಟೆ ತಾಲೂಕಿಗೆ ಸಂಬಂಧಿಸಿದ್ದಂತೆ ಆಧಿಕಾರಿ, ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ್ದಂತೆ ಸರ್ಕಾರಕ್ಕೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿ ದ್ದಾರೆ. ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ್ದಂತೆ ಜಿಲ್ಲಾಧಿಕಾರಿಗೆ ಇದ್ದ ಅಧಿಕಾರ ಹಿಂಪಡೆದಿರುವುದರಿಂದ ನೇಮಕಾತಿಗೆ ವಿಳಂಬವಾಗಿದೆ. ಪ್ರಸ್ತುತ ಇರುವ ಸಿಬ್ಬಂದಿ ಬಳಸಿಕೊಂಡು ಸೇವೆ ನೀಡಲಾಗುತ್ತಿದೆ. ಎನ್.ಎಸ್. ಪ್ರಶಾಂತ್, ತಹಸೀಲ್ದಾರ್, ಪೊನ್ನಂಪೇಟೆ.

**
ಪೊನ್ನಂಪೇಟೆ ತಾಲೂಕು ಘೋಷಣೆಯಿಂದ ಇಮ್ಮಡಿಗೊಂಡಿದ್ದ ನಮ್ಮ ಉತ್ಸಾಹ ಈಗ ಕುಂದಿದೆ. ಯಾವ ಕೆಲಸಗಳೂ ನಡೆಯುತ್ತಿಲ್ಲ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ನೀಗಿಸುತ್ತಿಲ್ಲ. ನಿತ್ಯ ಅಲೆಯುವುದೇ ಸಾರ್ವಜನಿಕರ ಕಾಯಕವಾಗಿದೆ. ಪೌತಿ ಖಾತೆ ನಿರ್ವಹಣೆ ಯಲ್ಲಿನ ಗೊಂದಲ ಮುಂದುವರಿದಿದೆ. ಸರ್ವೇ ಇಲಾಖೆಯ ಸೇವೆ ಇಲ್ಲಿ ದೊರೆಯುವಂತೆ ಮಾಡಲಿ. ಚೆಪ್ಪುಡೀರ ಕೆ. ಸೋಮಯ್ಯ, ಖಜಾಂಚಿ, ಪೊನ್ನಂಪೇಟೆ ತಾಲೂಕು ರಚನೆ ಹೋರಾಟ ಸಮಿತಿ.

**
ಪೊನ್ನಂಪೇಟೆ ತಾಲೂಕು ಘೋಷಣೆಯಾಗಿ ೨ ವರ್ಷ ಪೂರೈಸಿದರೂ ಸಂಪೂರ್ಣವಾಗಿ ಎಲ್ಲ ಸೇವೆಗಳು ದೊರೆಯುತ್ತಿಲ್ಲ. ವಿರಾಜಪೇಟೆ ದೂರ ಎಂಬ ಕಾರಣಕ್ಕೆ ಸಮೀಪದಲ್ಲಿ ಸರ್ವೇ, ಕಂದಾಯ ಸೇವೆಗಳು ದೊರೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಸ್ಪಂದಿಸುವವರು ಸಿಗುತ್ತಿಲ್ಲ. ಅಲೆದಾಟ ಮುಂದುವರಿದಿದೆ. ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಹೋರಾಟಗಾರರು, ಪೊನ್ನಂಪೇಟೆ ತಾಲೂಕು ರಚನೆ ಹೋರಾಟ ಸಮಿತಿ.

**
ಪೊನ್ನಂಪೇಟೆ ತಾಲೂಕು ವ್ಯಾಪ್ತಿ ಎಲ್ಲಾ ಗ್ರಾಮಗಳ ಕಂದಾಯ, ಸರ್ವೇ ಸೇರಿದಂತೆ ಸರ್ಕಾರದ ಎಲ್ಲ ಸೇವೆಗಳು ದೊರೆಯಲಿ ಎಂಬ ನಮ್ಮ ಕನಸು ಈಡೇರಿಲ್ಲ. ಪ್ರತಿಯೊಂದು ದಾಖಲಾತಿಗೆ ವಿರಾಜಪೇಟೆ ಕಚೇರಿಗೆ ಕಳುಹಿಸಲಾಗುತ್ತಿದೆ. ಇದು ಸರಿಯಾಗಬೇಕು. ಕೃಷಿ ಚಟುವಟಿಕೆ ನಡುವೆ ದಾಖಲಾತಿಗೂ ಪರದಾಡುವ ಸ್ಥಿತಿಯಿಂದ ಹೊರ ಬರಲು ಸರ್ಕಾರ ಮುಂದಾಗಲಿ. ಕೊಳೇರ ಭಾರತಿ, ಉಪಾಧ್ಯಕ್ಷೆ, ಮಹಿಳಾ ಸಮಾಜ, ಪೊನ್ನಂಪೇಟೆ.

**
ಪೊನ್ನಂಪೇಟೆ ತಾಲೂಕು ರಚನೆಯಾದ ನಂತರ ವಿರಾಜಪೇಟೆಗೆ ತೆರಳದಂತೆ ಸೇವೆ ನೀಡಲು ಸರ್ಕಾರ ಮುಂದಾಗಬೇಕಿದೆ. ದಾಖಲಾತಿಗಳು ದೊರೆಯುತ್ತಿಲ್ಲ ಎಂಬ ನೋವು ಜನರಿಂದ ಕೇಳಿ ಬರುತ್ತಿದೆ. ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರದ ಸ್ಪಂದನೆ ಬೇಕು. ತಾಲೂಕು ಕೇಂದ್ರ ಸ್ಥಾನ ಅಭಿವೃದ್ಧಿಗೆ ಭಿನ್ನ ಚಿಂತನೆ ಅವಶ್ಯ. ಬಾಚಮಾಡ ಭವಿಕುಮಾರ್, ತಾಲೂಕು ಅಧ್ಯಕ್ಷರು, ರೈತ ಸಂಘ, ಶ್ರೀಮಂಗಲ. (ಚಿತ್ರ: ಬಾಚಮಾಡ ಭವಿಕುಮಾರ್)