ರೇವತಗಾಂವ: ಕೇಂದ್ರ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ತೋಟಗಾರಿಕೆ ಬೆಳೆಗಳನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡಲು ಅನುಮತಿ ನೀಡಿದೆ. ಆದರೂ ದಾಳಿಂಬೆ ಬೆಲೆ ಕುಸಿತದಿಂದ ರೈತ ಆತಂಕಕ್ಕೊಳಗಾಗಿದ್ದಾನೆ.
ಪೊಲೀಸರ ಕಿರಿಕಿರಿ ಇಲ್ಲದೇ ಬೆಳೆ ಸಾಗಣೆ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ, ಲಾಕ್‌ಡೌನ್ ಹಿನ್ನ್ನೆಲೆಯಲ್ಲಿ ಬೆಲೆ ಕುಸಿತದಿಂದ ದಾಳಿಂಬೆಯನ್ನು ಕೇಳುವವರೇ ಇಲ್ಲದಂತಾಗಿದೆ. ವಿಪರೀತ ಬಿಸಿಲಿನಿಂದ ಜಮೀನಿನಲ್ಲಿರುವ ದಾಳಿಂಬೆ ಸೀಳಿ, ಕೆಡುತ್ತಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ದಾಳಿಂಬೆ ಕಣ್ಮುಂದೆ ಹಾಳಾಗುತ್ತಿರುವುದರಿಂದ ರೈತ ಗಾಬರಿಗೊಂಡಿದ್ದಾನೆ.
ಗ್ರಾಮದಲ್ಲಿ ಅಂದಾಜು 100 ಎಕರೆಯಲ್ಲಿ ದಾಳಿಂಬೆ ಬೆಳೆಯಲಾಗಿದೆ. ಬೆಲೆ ಕುಸಿತದಿಂದ ಮಾರಲು ಆಗದೇ, ಇಟ್ಟುಕೊಳ್ಳಲಾಗದಂಥ ಸ್ಥಿತಿಯಲ್ಲಿರುವ ದಾಳಿಂಬೆ ಬೆಳೆಗಾರರಾದ ಸಿದ್ದಪ್ಪ ಅದಿಬಂಡೆ, ಮಹಾದೇವ ಧೈವಾಡೆ, ಹನುಮಂತ ಮಾಶ್ಯಾಳ, ಭೀಮಾಶಂಕರ ಬಂಢಗರ, ಬಂಡಣ್ಣ ಕುಂಬಾರ, ಮಲಕಪ್ಪ ಮಾಳಿ, ಅಣ್ಣಪ್ಪ ಮಾಳಿ ಸಂಕಟ ಪಡುತ್ತಿದ್ದಾರೆ. ಹಾಳಾಗುತ್ತಿರುವ ದಾಳಿಂಬೆಗೆ ಸರ್ಕಾರ ಸಹಾಯಧನ ನೀಡಬೇಕು. ಇಲ್ಲವೇ ಸ್ಥಳಕ್ಕಾಗಮಿಸಿ ಸಗಟಾಗಿ ದಾಳಿಂಬೆ ಖರೀದಿಸಿ ರೈತರನ್ನು ಸಾಲದ ಮಡುವಿನಿಂದ ಪಾರಮಾಡಬೇಕೆಂದು ಒತ್ತಾಯಿಸಿದ್ದಾರೆ.