ಜಿಲ್ಲೆ

ಕಲುಷಿತ ನೀರು, ಅಧಿಕಾರಿಗಳೇ ಹೊಣೆ-ಸಿಎಂ ಎಚ್ಚರಿಕೆ

ಚಿತ್ರದುರ್ಗ: ರಾಜ್ಯದ ಯಾವುದೇ ಮೂಲೆಯಲ್ಲಾಗಲಿ ಕಲುಷಿತ ನೀರು ಪೂರೈಸಿ ಅನಾಹುತ ಸಂಭವಿಸಿದರೆ, ಅಧಿಕಾರಿಯನ್ನೇ ಹೊಣೆಯಾಗಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕವಾಡಿಗರಹಟ್ಟಿಯಲ್ಲಿ ಶುಕ್ರವಾರ ಜನರ ಮನವಿ ಸ್ವೀಕರಿಸಿ ಮಾತನಾಡಿ, ಈ ಹಟ್ಟಿಯಲ್ಲಿ ಆ.1ರಂದು ಕಲುಷಿತ ನೀರು ಸೇವಿಸಿ 241 ಜನ ಅಸ್ವಸ್ಥರಾಗಿ, 6 ಮಂದಿ ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ ಎಂದರು.

ಸರಿಯಾದ ರೀತಿಯಲ್ಲಿ ನೀರು ಪೂರೈಸದಿರುವುದೆ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಶುದ್ಧ ನೀರು ಸರಬರಾಜಿಗೆ ಕ್ರಮವಹಿಸಿದ್ದರೆ ಈ ದುರ್ಘಟನೆ ನಡೆಯುತ್ತಿರಲಿಲ್ಲ ಎಂದರು.

ಶುದ್ಧ ನೀರು ಕೊಡುವುದು ಸರ್ಕಾರದ ಜವಾಬ್ದಾರಿ. ಹೀಗಾಗಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಜಿಪಂ ಸಿಇಒಗೆ ಶುದ್ಧ ನೀರು ಪೂರೈಕೆಗೆ ಸೂಚಿಸಲಾಗಿದೆ. ಬರವಿದ್ದರೂ ಕುಡಿಯುವ ನೀರಿಗೆ ಎಲ್ಲಿಯೂ ತೊಂದರೆ ಉಂಟಾಗಬಾರದು ಎಂದು ಸೂಚಿಸಿದರು.