ಜಿಲ್ಲೆ

ಕೆರೆಗೆ ಕಲುಷಿತ ನೀರು ಸೇರಿ ಸಾವಿರಾರು ಮೀನುಗಳ ಸಾವು

ಬಿಡದಿ: ಕೈಗಾರಿಕಾ ಪ್ರದೇಶದಿಂದ ಕೆರೆಗೆ ಕೆಮಿಕಲ್ ಮಿಶ್ರಿತ ನೀರು ಹರಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಇಟ್ಟಮಡು ಗ್ರಾಮದಲ್ಲಿ ಶನಿವಾರ ನಡೆದಿದೆ.
 ಗ್ರಾಮದ ಹೊರ ವಲಯದಲ್ಲಿರುವ ದೊಡ್ಡಕೆರೆಗೆ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಮಿಶ್ರಣವಾಗಿರುವ ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಮೀನುಗಳ ಮಾರಣಹೋಮ ನಡೆದಿದೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಹಲವು ಕಾರ್ಖಾನೆಗಳು ಹಾಗೂ ಬಿಎಂಟಿಸಿ ಬಸ್ ಡಿಪೋದಿಂದ ಬರುವ ತ್ಯಾಜ್ಯದ ನೀರು ದೊಡ್ಡ ಚರಂಡಿ ಮೂಲಕ ಇಟ್ಟಮಡು ಗ್ರಾಮದ ಕೆರೆ ಸೇರುತ್ತದೆ.
ಅದೇ ರೀತಿ ತಡರಾತ್ರಿ ಕೂಡ ನೀರು ಕೆರೆ ಸೇರಿದೆ ಆದರೆ ಯಾವುದೊ ಕಾರ್ಖಾನೆಯಿಂದ ಕಲುಷಿತ ನೀರು ಚರಂಡಿ ಸೇರಿ ನಂತರ ಕೆರೆ ಸೇರಿದೆ. ಶನಿವಾರ ಬೆಳಿಗ್ಗೆ ಸಾವಿರಾರು ಮೀನುಗಳು ಸತ್ತು ಕೆರೆಯ ದಡ ಸೇರಿವೆ. ಸುಮಾರು 3 ರಿಂದ 4  ಕೆ.ಜಿಯಷ್ಟು ತೂಕದ ಮೀನುಗಳು ಸೇರಿದಂತೆ ಮರಿಗಳು ಸತ್ತು ಕೆರೆಯ ದಡದಲ್ಲಿ ತೇಲುತ್ತಿವೆ.
ಸಾವಿರಾರು ಸಂಖ್ಯೆಯಲ್ಲಿ ಮೀನುಗಳು ಸಾವನ್ನಪ್ಪಿದ ವಿಷಯ ತಿಳಿದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವ ಕಾರಣಕ್ಕೆ ಮೀನು ಸಾವನ್ನಪ್ಪಿವೆ ಎಂದು ಮೊದಲು ತಿಳಿದುಕೊಂಡು ನಂತರ ಕ್ರಮ ವಹಿಸಲಾಗುತ್ತದೆ ಎಂದರು.