ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ದಕ್ಷಿಣ ಶಿಕ್ಷಕರ ಕ್ಷೇತ್ರ ಬೆಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರ ಪರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮತಯಾಚನೆ ಮಾಡಿದರು. ಎಸ್.ಬಾಲರಾಜ್, ಎಸ್.ದತ್ತೇಶ್‌ಕುಮಾರ್ ಇತರರು ಇದ್ದರು. 
ಜಿಲ್ಲೆ

ಎನ್‌ಡಿಎ ಅಭ್ಯರ್ಥಿ ಪರ ಕೊಳ್ಳೇಗಾಲದಲ್ಲಿ ಮತಯಾಚನೆ

ಎಂ.ರವಿ

ಕೊಳ್ಳೇಗಾಲ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಗುರುವಾರ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಪರವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮತಯಾಚನೆ ಮಾಡಿದರು.

ಮಾನಸ ಶಿಕ್ಷಣ ಸಂಸ್ಥೆ, ಶ್ರೀ ವಾಸವಿ ವಿದ್ಯಾ ಸಂಸ್ಥೆ, ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಬಿ.ಎಂ.ಎಚ್.ಪಿ ಶಾಲೆ, ಜಿ.ವಿ ಗೌಡ ಕಾಲೇಜು, ಎಸ್‌ವಿಕೆ ಕಾಲೇಜು, ಸಂತ ಪ್ರಾನ್ಸಿಸ್ ಶಾಲೆ, ಕಾರ್ನರ್ ಸ್ಟೋನ್ ಕಾಲೇಜು ಸೇರಿದಂತೆ ಇನ್ನಿತರ ವಿದ್ಯಾ ಸಂಸ್ಥೆಗಳಿಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್‌ಕುಮಾರ್ ಭೇಟಿ ನೀಡಿ ಮತ ಪ್ರಚಾರ ಮಾಡಿದರು.

ಈ ವೇಳೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯ ತಂದಿರುವ ಹೊಸ ಶಿಕ್ಷಣ ನೀತಿಗೆ ಶಕ್ತಿ ತುಂಬಬೇಕು. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಬೇಕಿದೆ. ಈ ಅವಧಿಯಲ್ಲಿ ಓದುವ ಎಲ್ಲ ಮಕ್ಕಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಂತೆ ಉದ್ಯೋಗ ಸಿಗಬೇಕು. ಉತ್ಪಾದಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಮೂಲ ಆಶಯ ಇಟ್ಟುಕೊಂಡಿರುವ ಹೊಸ ಶಿಕ್ಷಣ ನೀತಿಗೆ ಬೆಂಬಲ ಸೂಚಿಸಲು ಎನ್‌ಡಿಎ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅವರನ್ನು ಗೆಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮತದಾರರು ಪ್ರಥಮ ಪ್ರಾಶಸ್ತ್ಯ ಮತ ನೀಡಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಕೆ.ವಿವೇಕಾನಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಸ ಮುಖವಾಗಿದ್ದಾರೆ. ಹೊಸ ವಿಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡುತ್ತಾರೆ. ಹಿಂದೆ ಗೆದ್ದಿರುವವರಿಂದ ಉತ್ತಮ ಪ್ರತಿಕ್ರಿಯೆ ಕೊಡುವ ಮಟ್ಟಿಗೆ ಕೆಲಸ ಮಾಡಿಲ್ಲ. ಆದರೆ, ಕೆ.ವಿವೇಕಾನಂದ ಅವರಿಂದ ಬದಲಾವಣೆ ನಿರೀಕ್ಷಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲುವು ನೀಡಬೇಕೆಂದು ಮನವಿ ಮಾಡಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ, ನಗರಸಭೆ ಸದಸ್ಯರಾದ ಚಿಂತು ಪರಮೇಶ್, ಪ್ರಕಾಶ್ ಶಂಕನಪುರ, ನಶೀರ್ ಷರೀಫ್, ಬಿಜೆಪಿ ಎಸ್ಸಿ ಮೋರ್ಚಾ ಘಟಕದ ಟೌನ್ ಅಧ್ಯಕ್ಷ ಎಸ್.ಸಿದ್ದಪ್ಪಾಜಿ, ಮುಖಂಡರಾದ ಜಗದೀಶ್ ಶಂಕನಪುರ, ಸುರೇಶ್, ಕೆ.ಕೆ.ಮೂರ್ತಿ, ಚಂದ್ರು, ಸೋಮಣ್ಣ ಉಪ್ಪಾರ್ ಮತ್ತಿತರರಿದ್ದರು.