ಜಿಲ್ಲೆ

ರಾಜಕಾರಣದ ಶುದ್ಧೀಕರಣ ಅಗತ್ಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದಿನ ರಾಜಕಾರಣ ಬಹಳ ಕಲುಷಿತಗೊಂಡು, ದ್ವೇಷದ ರಾಜಕಾರಣ ಹೆಚ್ಚಿದೆ. ಹಿಂದಿನ ಆದರ್ಶದ ರಾಜಕಾರಣಿಗಳು ಇಲ್ಲ. ರಾಜಕಾರಣ ಶುದ್ಧೀಕರಣಗೊಳ್ಳುವ ಅಗತ್ಯವಿದೆ ಎಂದು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಭವನದಲ್ಲಿ ಏರ್ಪಡಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಶಂಕರ ಪಾಗೋಜಿ ವಿರಚಿತ "ಗಾಂಧಿ ಮಂದಿರ' ಕಥಾ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಎಲ್ಲಿಯವರೆಗೂ ಹಣ ಪಡೆದು ಮತ ಹಾಕುವವರೆಗೂ ವ್ಯವಸ್ಥೆಯನ್ನು ಬದಲಾಯಿಸುವುದು ಅಸಾಧ್ಯ. ಈ ವ್ಯವಸ್ಥೆಯೊಂದಿಗೆ ಬದುಕುವ ಸಂದಿಗ್ಧತೆ ಎದುರಾಗಿದೆ. ಹೀಗಾಗಿ ಹಣ ಪಡೆದು ಮತ ಹಾಕುವ ಕೆಟ್ಟ ಪ್ರವೃತ್ತಿ ಬಿಡಬೇಕು. ಜಗತ್ತಿನಲ್ಲಿ ಮಹಾತ್ಮ ಗಾಂಧೀಜಿ ಅತ್ಯಂತ ಶ್ರೇಷ್ಠ ವ್ಯಕ್ತಿ. ತಮ್ಮ ಮೈಮೇಲೆ ಬಟ್ಟೆ ಹಾಕದೆ, ಇಡೀ ದೇಶಕ್ಕಾಗಿ ಜೀವನ ಮುಡುಪಾಗಿ ಇಟ್ಟವರು. ಇಂತಹ ಅನೇಕ ಮಹನೀಯರ ಹೋರಾಟದ ಫಲದಿಂದ ಬಂದ ಸ್ವಾತಂತ್ರ್ಯ ರ್ದುಬಳಕೆಗೆ ವಿಷಾದಿಸಿದರಲ್ಲದೆ, ಯುವಜನ ದೇಶ ಕಟ್ಟುವ ಕಾಯಕ ಮಾಡಬೇಕು ಎಂದರು.

ಕೃತಿ ಕುರಿತು ನಟರಾಜ ಮೂರಶಿಹಳ್ಳಿ ಮಾತನಾಡಿ, ಗಾಂಧಿ ಮಂದಿರ ಶಂಕರ ಪಾಗೋಜಿ ಅವರ ಬದುಕು -ಬರಹದ ಕುರಿತು 17 ಕಥೆಗಳು ಒಳಗೊಂಡಿದೆ. ಕೃತಿಯ ಬರಹದ ಭಾವ, ಗ್ರಾಮೀಣರ ಜನಜೀವನ, ಅಂತರ ಜಾತಿ ಮತ್ತು ಪ್ರೇಮ ವಿವಾಹ ಚಿತ್ರಣ ಕಟ್ಟಿಕೊಟ್ಟ ಪ್ರಯತ್ನ ಅದ್ಭುತವಾಗಿದೆ ಎಂದರು.

ಬೆಂಗಳೂರಿನ ಸಿರಿವರ ಪ್ರಕಾಶನದ ಪ್ರಕಾಶಕ ರವೀಂದ್ರನಾಥ ಸಿರಿವರ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಇತರರು ಇದ್ದರು.

ಶಂಕರ ಪಾಗೋಜಿ ಸ್ವಾಗತಿಸಿದರು. ಡಾ. ಬಸವರಾಜ ಹೊಂಗಲ ನಿರೂಪಿಸಿದರು. ನಂತರ ಮಲ್ಲಪ್ಪ ಹೊಂಗಲ್​ ನಿರ್ದೇಶನದ ಕೊನೆ ನಮಸ್ಕಾರ ನಾಟಕ ಪ್ರದರ್ಶನಗೊಂಡಿತು.