ಜಿಲ್ಲೆ

ರೈತರ ಸಾವಿನ ವಿಷಯದಲ್ಲೂ ರಾಜಕೀಯ ಸರಿಯಲ್ಲ

ಹಾನಗಲ್ಲ: ಅಧಿವೇಶನದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ರೈತರ ಆತ್ಮಹತ್ಯೆ ಸಮಸ್ಯೆಯ ಕುರಿತು ಧ್ವನಿಗೂಡಿಸಬೇಕಿತ್ತು. ಆದರೆ, ರೈತರ ಸಾವಿನ ವಿಷಯದಲ್ಲೂ ರಾಜಕೀಯವಾಗಿ ಸರ್ಕಾರ ಸಮರ್ಥನೆ ಮಾಡಿಕೊಳ್ಳಲು ಹೊರಟಿರುವುದು ರೈತ ವಿರೋಧಿ ಧೋರಣೆಯಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರ ಮಾತನ್ನು ಅಲ್ಲಗಳೆದು, ಜಿಲ್ಲೆಯಲ್ಲಿ ಕೇವಲ 6 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ. ರೈತರ ಮತ ಪಡೆದು ಅಧಿಕಾರಕ್ಕೆ ಬಂದಿರುವ ಶಾಸಕರು ಮತ್ತು ಸರ್ಕಾರ ರೈತರ ಸಾವಿನಲ್ಲಿ ಅನುಮಾನ ಪಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಆತ್ಮಹತ್ಯೆಗೆ ಒಳಗಾದ ಜಿಲ್ಲೆಯ ರೈತರ ಕುರಿತು ಶಾಸಕರು ಅಪಸ್ವರದ ಮಾತುಗಳನ್ನಾಡಿರುವುದಕ್ಕೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ರೈತ ಸಂಘ ಅವರ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

2023ರಲ್ಲಿ ಹಾನಗಲ್ಲ ತಾಲೂಕಿನ ಅನ್ನದಾತರು ನಿರೀಕ್ಷಿತ ಬೆಳೆ ಬಾರದೇ, ಇದಕ್ಕಾಗಿ ಮಾಡಿದ್ದ ಸಾಲ ತೀರಿಸಲಾಗದೇ 9 ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಸಾಲಕ್ಕೆ ಹೆದರಿ ಜೀವ ಕಳೆದುಕೊಳ್ಳದಂತೆ ರೈತರಿಗೆ ಸಂಘದಿಂದ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಆದರೂ, ಕೆಲ ಗ್ರಾಮಗಳಲ್ಲಿ ರೈತರು ಸಾಲ ತೀರಿಸಲು ಸಾಧ್ಯವಾಗದೇ ಹೆದರಿ ನೇಣಿಗೆ ಕೊರಳೊಡ್ಡಿದ್ದಾರೆ ಎಂದರು.

ಬ್ಯಾಂಕ್‌ಗಳ, ಖಾಸಗಿ ಫೈನಾನ್ಸಗಳ ಕಿರುಕುಳ, ನೋಟಿಸ್ ನೀಡುವುದರಿಂದ ಮಾನಸಿಕ ಒತ್ತಡ ಉಂಟಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳು ರೈತರ ಸಾಲ ವಸೂಲಿಗೆ ಕಾನೂನು ಕ್ರಮಕ್ಕೆ ಮುಂದಾಗುತ್ತಿರುವುದು ರೈತರ ಆತಹತ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಇದಕ್ಕೆಲ್ಲ ಸರ್ಕಾರ ಕಡಿವಾಣ ಹಾಕಬೇಕು ಎಂದರು.

ತಾಲೂಕಿನ ರೈತ ಕುಟುಂಬವದವರು ಆತ್ಮಹತ್ಯೆ ಮಾಡಿಕೊಂಡ ರೈತರ ಭಾವಚಿತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಸಂಘದ ಪದಾಧಿಕಾರಿಗಳಾದ ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಷಣ್ಮುಖಣ್ಣ ಅಂದಲಗಿ, ಅಜ್ಜನಗೌಡ ಕರೆಗೌಡ್ರ, ಕುಮಾರ ಹಣ್ಣಿ, ಜಗದೀಶ ಭಂಗಿ, ಮೂಕಯ್ಯ ಗುರುಲಿಂಗಮ್ಮನವರ, ಚಿಕ್ಕಪ್ಪ ಅಂಬಿಗೇರ, ವೀರೇಶ ಬಾಳಂಬೀಡ, ನಿಂಗಪ್ಪ ಅಕ್ಕಿವಳ್ಳಿ, ಹೊಳೆಯಪ್ಪ ಹೊಳೆಯಣ್ಣನವರ, ಎಂ.ಎಂ. ಬಡಗಿ, ಮಾರ್ತಾಂಡೆಪ್ಪ ಮಣ್ಣಮ್ಮನವರ ಇತರರು ಉಪಸ್ಥಿತರಿದ್ದರು.