ಭಟ್ಕಳ: ಗುಡ್ಡ ಕುಸಿತದ ಪ್ರದೇಶಕ್ಕೆ ತೆರಳಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡ ರಾಜ್ಯ ಸರ್ಕಾರದ ದಿಟ್ಟ ನಡೆಗೆ ರಾಜ್ಯ ಬಿಜೆಪಿ ಹತಾಶಗೊಂಡಿದ್ದು, ಸೂತಕದ ಮನೆಯಲ್ಲೂ ಹೊಲಸು ರಾಜಕೀಯಕ್ಕೆ ಇಳಿದಿರುವದು ನಾಚಿಕೆಗೇಡಿನ ಸಂಗತಿ ಎಂದು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಡ್ಡ ಕುಸಿತದಂತ ಅನಾಹುತ ಎಲ್ಲೂ ನಡೆಯಬಾರದು. ಪ್ರಕೃತಿ ವಿಕೋಪ ನಡೆದ ಬಳಿಕ ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ನಾಪತ್ತೆಯಾದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಅದೀವೇಶನದಲ್ಲಿ ಇದ್ದರೂ ಸಭಾಧ್ಯಕ್ಷ, ಮುಖ್ಯಮಂತ್ರಿಗಳಿಂದ ಒಪ್ಪಿಗೆ ಪಡೆದು ದುರಂತ ನಡೆದ ಸ್ಥಳಕ್ಕೆ ಕೇವಲ 8 ಗಂಟೆಯಲ್ಲಿ ತಲುಪಿದ್ದೇನೆ. ಸ್ವತಃ ಮುಖ್ಯಮಂತ್ರಿಗಳು ಬಂದು ತೆಗೆದುಕೊಂಡ ಕ್ರಮಗಳನ್ನು ಪರಿಶೀಲನೆ ನಡೆಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಹತಾಶಗೊಂಡ ರಾಜ್ಯ ಬಿಜೆಪಿ ತನ್ನ ಕರ್ನಾಟಕ ಫೇಸ್‌ಬುಕ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ನಾಚಿಕೆ ಗೇಡು. ಸಾವಿನ ಮನೆಯಲ್ಲಿ ರಾಜಕೀಯ ಮಾಡುವ ಹಂತಕ್ಕೆ ತಲುಪಿರುವದು ದುರಾದೃಷ್ಟಕರ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ 6 ಸಚಿವರ ಫೋಟೋ ಬಳಸಿ ಪೋಸ್ಟರ್ ಅಪ್ಲೋಡ್ ಮಾಡಿದೆ. ಪ್ರವಾಹದಿಂದ ಜಿಲ್ಲೆಗಳು ಮುಳುಗುತ್ತಿದ್ದರೂ ಅತ್ತ ಕಡೆ ಇನ್ನೂ ಕಾಲಿಡದೆ ಕಾಣೆಯಾಗಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿದೆ. ದಯವಿಟ್ಟು ಇವರನ್ನು ಹುಡುಕಿಕೊಡಿ ಎಂಬ ಅಡಿ ಬರಹ ಬೇರೆ. ಉತ್ತರ ಕನ್ನಡ ಉಸ್ತುವಾರಿ ಮಂಕಾಳ ವೈದ್ಯ ಸಹಿತ ಬೆಳಗಾವಿ ಉಸ್ತುವಾರಿ ಸತೀಶ ಜಾರಕಿಹೊಳಿ, ಉಡುಪಿ ಉಸ್ತುವಾರಿ ಲಕ್ಷ್ಮಿ ಹೆಬ್ಬಾಳಕರ್, ಶಿವಮೊಗ್ಗ ಉಸ್ತುವಾರಿ ಮಧು ಬಂಗಾರಪ್ಪ, ಕೊಡಗು ಉಸ್ತುವಾರಿ ಕೆ.ಜೆ.ಜಾರ್ಜ್ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ದಿನೇಶ ಗುಂಡೂರಾವ್ ಅವರ ಫೋಟೊ ಈ ಪೋಸ್ಟರ್ ನಲ್ಲಿದೆ.
ದುರಂತದಲ್ಲಿ ಅಸುನೀಗಿದವರ ಕುಟುಂಬಕ್ಕೆ 24 ಗಂಟೆಯೊಳಗೆ ಸಂಕಷ್ಟ ಪರಿಹಾರ ನೀಡಿ ಸಾಂತ್ವನ ಹೇಳಿದ್ದೇವೆ. ಎರಡು ದಿನ ಬಿಟ್ಟು ಮತ್ತೆ ಘಟನಾ ಸ್ಥಳಕ್ಕೆ ಮತ್ತು ದುರಂತದಲ್ಲಿ ನಿರಾಶ್ರಿತರಾದ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಸರ್ಕಾರದ ನೆರವಿನ ಜೊತೆಗೆ ವೈಯಕ್ತಿಕವಾಗಿಯೂ ಸಹಾಯ ಮಾಡಿದ್ದೇನೆ ಹೊರತೂ ಇಡೀ ಜಿಲ್ಲೆ ಆತಂಕದಲ್ಲಿರುವಾಗ ರಾಜಕೀಯ ಲಾಭ ಪಡೆಯುವ ಸಣ್ಣತನ ಮಾಡಿಲ್ಲ ಎಂದು ಅವರು ಟಾಂಗ್ ನೀಡಿದ್ದಾರೆ.
11 ವರ್ಷಗಳ ಕಾಲ ನಿಮ್ಮದೇ ನಾಯಕನ ಮಾಲೀಕತ್ವದ ಐಆರ್‌ಬಿ ಕಂಪನಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತ ಬಂದರೂ, ಅನೇಕ ಸಾವುಗಳು ಸಂಭವಿಸುತ್ತ ಬಂದರೂ ನಿಮ್ಮ ಪಕ್ಷದ ಒಂದೇ ಒಂದು ಶಾಸಕರು, ಸಂಸದರು ಇದುವರೆಗೂ ಧ್ವನಿ ಎತ್ತಿಲ್ಲ. ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಅವರು ಶಿರೂರಿಗೆ ಬಂದು ಸಾವಿನ ನೋವಿನಲ್ಲಿದ್ದವರಿಗೆ ಸಾಂತ್ವನ ಹೇಳುವುದು ಬಿಟ್ಟು ಪಕ್ಷದ ಶಾಲು ಹಾಕಿ ಸನ್ಮಾನ ಮಾಡಿಸಿಕೊಂಡು ನೆನಪಿನ ಕಾಣಿಕೆ ತಕೊಂಡು ಹೋದರಲ್ಲ…. ಇದೇನಾ ಜನ ಸಾಮಾನ್ಯರ ಬಗ್ಗೆ ನಿಮಗಿರುವ ಕಾಳಜಿ. ನಮ್ಮನ್ನು ಟೀಕಿಸುವುದಕ್ಕೆ ನಿಮಗೆಲ್ಲಿಯ ನೈತಿಕತೆ ಇದೆ ಸ್ವಾಮಿ? ಎಂದು ಅವರು ಪ್ರಶ್ನಿಸಿದ್ದಾರೆ.