ಜಿಲ್ಲೆ

ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಸರಿಯಲ್ಲ: ಸಭಾಪತಿ ಬಸವರಾಜ ಹೊರಟ್ಟಿ

ಮೈಸೂರು: ಸಹಕಾರ ಕ್ಷೇತ್ರದಲ್ಲಿ ರಾಜಕಾರಣ, ಹಸ್ತಕ್ಷೇಪ ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ನಗರದ ಶ್ರೀಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ನಿಂದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಮಾತನಾಡಿದರು. ಕಷ್ಟಕಾಲದಲ್ಲಿ ಜನರ ಕೈಹಿಡಿಯುವ ಸಹಕಾರ ಸಂಘಗಳಲ್ಲಿ ಸರ್ಕಾರ, ರಾಜಕಾರಣ ಹಸ್ತಕ್ಷೇಪ ಮಾಡಬಾರದು. ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಸರ್ಕಾರದ ಹಿಡಿತ ಸಂಬಂಧ ಚರ್ಚೆಯಾಯಿತು. ಆದರೆ ನಾವು ಅದಕ್ಕೆ ಆಸ್ಪದ ಕೊಡಲಿಲ್ಲ ಎಂದರು.
ಎಷ್ಟೋ ಸಹಕಾರ ಸಂಘಗಳು ಬೆಳೆದು ಇಂದು ಬ್ಯಾಂಕ್‌ಗಳಾಗಿ ಪರಿವರ್ತನೆಗೊಂಡಿವೆ. ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರಿಗೆ ಸಾಲ ನೀಡುವ ಮೂಲಕ ಕಷ್ಟದ ಕಾಲದಲ್ಲಿ ನೆರವಾಗಿವೆ. ಇಂತಹ ಕ್ಷೇತ್ರದಲ್ಲಿ ಯಾವುದೇ ಪಕ್ಷ, ರಾಜಕಾರಣಿ ಹಸ್ತಕ್ಷೇಪ, ರಾಜಕಾರಣ ಮಾಡಬಾರದು ಎಂದು ಕೋರಿದರು.
ಯಾವುದೇ ಒಬ್ಬ ವ್ಯಕ್ತಿಯಿಂದ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಕೂಡಿಕೊಂಡು ತಿಳಿವಳಿಕೆಯಿಂದ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಂಘಗಳು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಅವ್ಯವಹಾರ, ವ್ಯತ್ಯಾಸಗಳಿಂದ ಎಷ್ಟೋ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಕೃಷ್ಣರಾಜೇಂದ್ರ ಬ್ಯಾಂಕ್ 99 ವರ್ಷಗಳು ತುಂಬಿದ್ದು, ಎಲ್ಲವೂ ಸರಿ ಇದ್ದರೆ ಮಾತ್ರ ಸಂಘಗಳು ಯಶಸ್ವಿಯಾಗಿ ನಡೆಯಲು ಸಾಧ್ಯ ಎಂದರು.
ಸಹಕಾರ ಸಂಘಗಳಲ್ಲಿ ರಾಜಕಾರಣ, ಸರ್ಕಾರದ ಹಸ್ತಕ್ಷೇಪ ಇಲ್ಲದಂತೆ ಸ್ವಾಯತ್ತ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಖಾಸಗಿ ಬ್ಯಾಂಕ್‌ಗಳಲ್ಲಿ ಷೇರುದಾರರು ದೊಡ್ಡ ಉದ್ಯಮಿಗಳಾಗಿರುತ್ತಾರೆ. ಆದರೆ ಸಹಕಾರ ಸಂಘಗಳಲ್ಲಿ ಇದು ಕಡಿಮೆ. ಮಧ್ಯಮ ವರ್ಗದವರು ಹೆಚ್ಚಿನ ಜನರು ಇರುತ್ತಾರೆ. ಸಹಕಾರಿ ಸಂಸ್ಥೆಗಳು ಉಳಿಯಬೇಕು, ಬೆಳೆಯಬೇಕು ಎಂದು ಹೇಳಿದರು.
ಈ ಹಿಂದೆ ಸಹಕಾರ ಸಂಘಗಳ ಚುನಾವಣೆಗಳು ಗೊತ್ತೇ ಆಗುತ್ತಿರಲಿಲ್ಲ. ಆದರೆ ಈಗ ಲೋಕಸಭೆ, ವಿಧಾನಸಭಾ ಚುನಾವಣೆಗಳಿಗಿಂತಲೂ ಕಡಿಮೆ ಇಲ್ಲದಂತೆ ಚುನಾವಣೆಗಳು ನಡೆಯುತ್ತವೆ. ಸಾರ್ವತ್ರಿಕ ಚುನಾವಣೆ ನಾಚಿಸುವಂತೆ ನಡೆಯುತ್ತಿರುವ ಕುರಿತು ಸಹಕಾರಿಗಳು ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
9088 ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್ ಶೇ. 8ರ ಬಡ್ಡಿ ದರದಲ್ಲಿ 43 ಕೋಟಿ ರೂ. ಸಾಲ ನೀಡಿದೆ. ಸದಸ್ಯರಿಗೆ ಬ್ಯಾಂಕ್ ನಮ್ಮದು ಎಂಬ ಮನೋಭಾವ ಬರಬೇಕು. ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚು ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕುಂದೂರು ಮಠದ ಡಾ.ಶ್ರೀಶರತ್‌ಚಂದ್ರ ಸ್ವಾಮೀಜಿ ಮಾತನಾಡಿದರು. ಬ್ಯಾಂಕ್ ಅಧ್ಯಕ್ಷ ಪ್ರತಿಧ್ವನಿ ಪ್ರಸಾದ್, ಉಪಾಧ್ಯಕ್ಷ ಡಿ.ಬಸವರಾಜು, ನಿರ್ದೇಶಕರಾದ ಎಂ.ಡಿ.ಪಾರ್ಥಸಾರಥಿ, ಕೆ.ಜಿ.ಶಂಕರನಾರಾಯಣಶಾಸ್ತ್ರಿ, ಎಂ.ಎ.ನಂಸಿದ್ದಪ್ಪ , ಎಚ್.ಎನ್. ಸರ್ವಮಂಗಳ, ಬಿ.ನಾಗರಾಜ್, ಎಂ.ಎನ್.ನವೀನ್‌ಕುಮಾರ್, ಎಚ್.ವಿ.ಭಾಸ್ಕರ್, ಎಂ.ಎಸ್.ಅರುಣ್ ಸಿದ್ದಪ್ಪ, ವಿ.ಎಂ.ನಾಗೇಂದ್ರ ಪ್ರಸಾದ್ ಇತರರು ಇದ್ದರು.