* ಚನ್ನಪಟ್ಟಣ ಚುನಾವಣಾ ಕಾವು
* ಎರಡೂ ಪಕ್ಷಗಳ ನಾಯಕರಿಂದ ಉತ್ತಮ ತಾಲೀಮು
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಘಟಾನುಘಟಿ ರಾಜಕಾರಣಿಗಳ ಪ್ರತಿಷ್ಠೆಯ ಕದನವಾಗಿರುವ ಚನ್ನಪಟ್ಟಣ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆದರೆ, ಸದ್ಯ ಚುನಾವಣಾ ತಾಲೀಮುಗಳು ಕ್ಷೇತ್ರದಿಂದ ಹೊರಗೆ ನಡೆಯುತ್ತಿರುವುದು ವಿಶೇಷ.
ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನದ ಉಪಚುನಾವಣೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದೆ. ಈ ಉಪಕದನ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನಡುವಿನ ಪ್ರತಿಷ್ಠೆಗೆ ಕಾರಣವಾಗಿದೆ. ತವರು ಜಿಲ್ಲೆಯಲ್ಲಿ ಅಸ್ತಿತ್ವ ಹಾಗೂ ಇಮೇಜ್ ಕಾಪಾಡಿಕೊಳ್ಳಲು ಈ ಮೂವರಿಗೂ ಈ ಚುನಾವಣೆ ಮಹತ್ವದ್ದಾಗಿದೆ. ಯಾವ ಪಕ್ಷದಿಂ ದಲೂ ಅಭ್ಯರ್ಥಿ ಆಯ್ಕೆ ಅಂತಿಮವಾಗದಿದ್ದರೂ, ಚುನಾವಣಾ ತಾಲೀಮು ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಶಸಾಭ್ಯಾಸಗಳು ಕ್ಷೇತ್ರದಿಂದ ಹೊರಗೆ ನಡೆಯುತ್ತಿರುವುದು ಗಮನಾರ್ಹ.
ಇದುವರೆಗೂ ಯಾವ ಅಭ್ಯರ್ಥಿ ಆಯ್ಕೆಯೂ ಅಂತಿಮಗೊಂಡಿಲ್ಲ. ಕ್ಷೇತ್ರದ ಯಾವ ಪದ ಕಾರ್ಯಕರ್ತರಿಗೂ ತಮ್ಮ ಉಮೇದುವಾರ ಯಾರು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದರ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿ ಬೊಂಬೆನಾಡ ಪಾಲಿಟಿಕ್ಸ್ ಗರಿಕೆದರಿಕೊಂಡಿದೆ. ಕ್ಷೇತ್ರದ ಚುನಾವಣೆಯನ್ನು ಕಾಂಗ್ರೆಸ್ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಮಾಜಿ ಸಂಸದ ಡಿ.ಕೆ.ಸುರೇಶ್ ಕ್ಷೇತ್ರ ವಶಪಡಿಸಿಕೊಳ್ಳಲು ರಾಜಧಾನಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಡಿ.ಕೆ.ಸುರೇಶ್ ಶುಕ್ರವಾರ ಮಾಗಡಿ ಶಾಸಕ ಎಚ್. ಸಿ. ಬಾಲಕೃಷ್ಣ ಜತೆಗೂಡಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮಳೂರು ಜಿಪಂ ವ್ಯಾಪ್ತಿಯ ಮುಖಂಡರು ಹಾಗೂ ಮಾಗಡಿ ಕ್ಷೇತ್ರದ ಮುಖಂಡರ ಸಭೆ ನಡೆಸಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಇದಲ್ಲದೇ ಶನಿವಾರವೂ ಬೆಂಗಳೂರಿನ ಆರ್. ಆರ್. ನಗರದ ಗ್ಲೋಬಲ್ ಕಾಲೇಜಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಕ್ಷೇತ್ರದ ಮುಖಂಡರ ಸರಣಿ ಸಭೆ ಹಮ್ಮಿಕೊಂಡಿದ್ದಾರೆ. ಚುನಾವಣಾ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಐದು ಜಿಪಂ ಹಾಗೂ ನಗರ ವ್ಯಾಪ್ತಿಯ ಪ್ರತ್ಯೇಕ ಸಭೆ ಆಯೋಜಿಸಿದ್ದಾರೆ. ಚುನಾವಣೆ ಹೊತ್ತಿನಲ್ಲೂ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಇದುವರೆಗೂ ಕಾಣಿಸಿಕೊಳ್ಳದಿದ್ದರೂ, ಚುನಾವಣೆಗೆ ಸಂಬಂಧಿಸಿದ ರಣವ್ಯೂಹ ರೂಪಿಸಲು ಬೆಂಗಳೂರನ್ನು ಕೇಂದ್ರಸ್ಥಾನ ಮಾಡಿಕೊಂಡಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಜೋರಾಗಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಅಷ್ಟೇ ಅಲ್ಲದೇ ಮೈತ್ರಿ ಪಕ್ಷದ ಚಟುವಟಿಕೆಗಳೂ ಕ್ಷೇತ್ರದ ಹೊರಗೆ ನಡೆಯುತ್ತಿರುವುದು ವಿಶೇಷ. ಬಿಡದಿಯಲ್ಲಿರುವ ಮಾಜಿ ಸಿಎಂ ಎಚ್ಡಿಕೆ ತೋಟದ ನಿವಾಸ ಕ್ಷೇತ್ರದ ಚುನಾವಣಾ ಚರ್ಚೆಯ ಕೇಂದ್ರಸ್ಥಾನವಾಗಿದೆ. ಈಗಾಗಲೇ ಹಲವಾರು ಸಭೆಗಳು ಈ ಜಾಗದಲ್ಲಿ ನಡೆದಿರುವುದನ್ನು ಕಾಣಬಹುದು. ಇನ್ನು, ಮೈತ್ರಿ ಪಕ್ಷದ ಪ್ರಬಲ ಟಿಕೆಟ್ ಅಕಾಂಕ್ಷಿ ಯೋಗೇಶ್ವರ್ ಸಹ ಬೆಂಗಳೂರಿನಲ್ಲಿ ಬೀಡುಬಿಟ್ಟು ನಾನಾ ತಂತ್ರಗಾರಿಕೆಯಲ್ಲಿ ಮಗ್ನವಾಗಿದ್ದಾರೆ.
ಈ ಕ್ಷೇತ್ರವನ್ನು ತಾನೇ ಉಳಿಸಿಕೊಳ್ಳಲು ಜೆಡಿಎಸ್ ಮುಂದಾಗಿದ್ದು, ಮೈತ್ರಿ ಪಕ್ಷದ ನಾಯಕ ಯೋಗೇಶ್ವರ್ ಮನವೊಲಿಸಲು ಸಹ ಬೆಂಗಳೂರಿನಲ್ಲಿಯೇ ಹರಸಾಹಸ ನಡೆಯುತ್ತಿದೆ. ಶುಕ್ರವಾರ ಏಟ್ರಿಯಾ ಹೋಟೆಲ್ನಲ್ಲಿ ಹಲವಾರು ಜೆಡಿಎಸ್ ನಾಯಕರು ಯೋಗೇಶ್ವರ್ ಮನವೊಲಿಸಲು ಹಲವಾರು ಗಂಟೆಗಳ ಸಭೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ. ಒಟ್ಟಾರೆ, ಹಲವಾರು ಕಾರಣಗಳಿಂದ ಚನ್ನಪಟ್ಟಣ ಉಪಕದನ ಹೈ ವೋಲ್ಟೆಜ್ ಪಡೆದಿದ್ದು, ಚುನಾವಣಾ ತಾಲೀಮುಗಳು ಕ್ಷೇತ್ರದ ಹೊರಗೆ ರಂಗು ಪಡೆಯುತ್ತಿರುವುದು ವಿಶೇಷ.
ಈಗಾಗಲೇ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಲಿದ್ದು, ಚುನಾವಣಾ ಅಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಸಭೆ ಹಾಗೂ ಸಮಾರಂಭಗಳ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಹೊರಗೆ ಚುನಾವಣಾ ತಂತ್ರಗಳನ್ನು ನಡೆಸಲು ರಾಜಕೀಯ ನಾಯಕರು ಮುಂದಾಗಿದ್ದಾರೆ. ಬೆಂಗಳೂರು ಕ್ಷೇತ್ರಕ್ಕೆ ಸನಿಹದಲ್ಲಿರುವ ಕಾರಣ ರಾಜಧಾನಿ ಕ್ಷೇತ್ರದ ಚುನಾವಣೆಯ ಹಾಟ್ಸ್ಪಾಟ್ ಆಗಿ ಬದಲಾಗಿದೆ. ಚುನಾವಣಾ ಆಯೋಗ ಕ್ಷೇತ್ರದ ಹೊರಗೂ ನಿಗಾವಹಿಸಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.