ಜಿಲ್ಲೆ

ಕರೊನಾದಿಂದ ಕಳೆಗುಂದಿದ ರಾಜಕೀಯ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೊನಾ ಕಾರಣದಿಂದ ರಾಜ್ಯ ರಾಜಕೀಯ ನಾಯಕರ ಲೆಕ್ಕಾಚಾರಗಳು ಸೂತ್ರ ಹರಿದ ಗಾಳಿಪಟದಂತಾಗಿದೆ.

ಸರ್ಕಾರದ ವಿರುದ್ಧ ಸೆಟೆದು ನಿಂತು, ಸರ್ಕಾರದ ತಪು್ಪ ನಿರ್ಧಾರಗಳನ್ನು ಎತ್ತಿತೋರಿಸಬೇಕೆಂಬ ಉತ್ಸಾಹದಲ್ಲಿದ್ದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಕರೊನಾ ಪ್ರಕರಣ ಅಕ್ಷರಶಃ ನಿರಾಸೆ ತಂದಿದೆ. ಈ ನಡುವೆಯೂ ಅವರು ಪಕ್ಷ ಸಂಘಟನೆಯನ್ನು ಕ್ರಿಯಾಶೀಲವಾಗಿಟ್ಟು, ಕಾರ್ಯಕರ್ತರಲ್ಲಿ ಚುರುಕುತನ ತರುವ ಪರೋಕ್ಷ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಮುಖ್ಯವಾಗಿ ದೊಡ್ಡಮಟ್ಟದಲ್ಲಿ ಪದಗ್ರಹಣ ಕಾರ್ಯಕ್ರಮ ರೂಪಿಸಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಬೇಕೆಂಬ ಅವರನ್ನು ಸುತ್ತುವರಿದವರ ಆಶಯ ಕೂಡ ಕರೊನಾದಿಂದಾಗಿ ಮಣ್ಣುಪಾಲಾಗಿದೆ.

ಇತ್ತ ಬಿಜೆಪಿ ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಪಕ್ಷದ ಬೇರನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಯೋಚಿಸಿತ್ತು. ಆದರೆ, ಕರೊನಾ ಪಕ್ಷದ ಯೋಜನೆಗಳನ್ನು ತಲೆಕೆಳಗಾಗಿಸಿದೆ. ಕರೊನಾ ಹಾವಳಿ ಇಷ್ಟಕ್ಕೆ ನಿಲ್ಲದೆ ಹೋದರೆ ಮತ್ತಷ್ಟು ರಾಜಕೀಯ ಚುಟುವಟಿಕೆ ಮಂಕಾಗುವ ಆತಂಕ ಪಕ್ಷಗಳಿಗಿದೆ.

ನೆರವಿನ ರಾಜಕೀಯ: ಈಗಾಗಲೇ ಮೂರು ಪ್ರಮುಖ ಪಕ್ಷಗಳು ಶಾಸಕರು ಮತ್ತು ಪದಾಧಿಕಾರಿಗಳಿಗೆ ಕರೆ ನೀಡಿ ಕರೊನಾ ಪೀಡಿತರ ಸಂಕಟ ಆಲಿಸಲು ಸೂಚಿಸಿವೆ. ಕೆಲವು ಕಡೆಗಳಲ್ಲಂತೂ ಪರಿಹಾರ ವಿತರಣೆಗೆ ಪೈಪೋಟಿ ಆರಂಭವಾಗಿದೆ. ಊಟೋಪಚಾರ, ದಿನಸಿ ವಿತರಣೆ, ಮಾಸ್ಕ್- ಸ್ಯಾನಿಟೈಸರ್ ವಿತರಣೆಗೆ ಪಕ್ಷಗಳು ಹೆಚ್ಚು ಆಸಕ್ತಿ ತೋರಿವೆ. ಮೇಲ್ನೋಟಕ್ಕೆ ಇದು ನೆರವು ನೀಡುವಂತೆ ಕಂಡರೂ, ಭವಿಷ್ಯದ ರಾಜಕೀಯ ಲೆಕ್ಕಾಚಾರದಲ್ಲೇ ಹೆಜ್ಜೆ ಇಡುತ್ತಿರುವುದು ಗುಟ್ಟಾಗಿ ಉಳಿದ ವಿಚಾರವೇನಲ್ಲ.

ಇಂದು ಕಾಂಗ್ರೆಸ್ ಸಭೆ

ಕರೊನಾ ಪೀಡನೆ ಸಂದರ್ಭದಲ್ಲಿ ಪಕ್ಷದ ಸಂಘಟನೆ ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು, ಅನುಷ್ಠಾನ ಹೇಗೆ, ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬ ಬಗ್ಗೆ ರೂಪುರೇಷೆ ಸಿದ್ಧಪಡಿಸಿ ಚರ್ಚೆ ನಡೆಸಲು ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಭೆ ಮಂಗಳವಾರ ನಡೆಯಲಿದೆ. ಪಕ್ಷದ ಕಚೇರಿಯಲ್ಲಿ ರಮೇಶ್ ಕುಮಾರ್ ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.