ಜಿಲ್ಲೆ

ರಾಜಕಾರಣದಲ್ಲಿ ಧರ್ಮ ಬೇಡ, ಅದಕ್ಕೆ ವೇದಿಕೆ ಬೇರೆ ಇದೆ

ರಮೇಶ ಮೇಳಕುಂದಾ

ಕಲಬುರಗಿ: ರಾಜಕಾರಣದಲ್ಲಿ ಧರ್ಮ ಇರಬಾರದು. ಅದಕ್ಕೆ ಬೇರೆ ಧಾರ್ಮಿಕ ವೇದಿಕೆ ಇದ್ದು, ಅಲ್ಲಿ ಚರ್ಚಿಸೋಣ. ರಾಜಕಾರಣಕ್ಕೆ ಧರ್ಮದ ಚರ್ಚೆ ಸೂಕ್ತವಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಲಬುರಗಿ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್, ನಾರಾಯಣಗುರು, ಬಸವಣ್ಣನವರಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಾಗಬೇಕು. ಸಾಮಾಜಿಕ ನ್ಯಾಯಕ್ಕೆ ನಮ್ಮ ಮೊದಲ ಆದ್ಯತೆ ಇದೆ. ನಾವು ರಾಜಕೀಯವಾಗಿ ಒಂದಾಗಿದ್ದೇವೆ. ರಾಜಕೀಯವೇ ಬೇರೆ ಅವರ ವಿಚಾರಗಳೇ ಬೇರೆ, ನಮ್ಮದು ಸರ್ವಧರ್ಮ ಸಮಭಾವ ಎಂದು ಹೇಳಿದರು.

ಭಾರತ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದ್ದು, ಜನರ ಮಧ್ಯೆ ವಿನಾಕಾರಣ ಗೊಂದಲ ಸೃಷ್ಟಿಸಲಾಗುತ್ತಿದೆ. ಸಂವಿಧಾನದಲ್ಲೇ ಭಾರತ ಇದೆ. ಎಲ್ಲರೂ ಭಾರತ್ ಅಮಾತಾ ಕೀ ಜೈ, ಜೈ ಹಿಂದ್ ಅಂತಾರೆ. ಮೋದಿ ಅವರೇ ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ 20 ಯೋಜನೆ, ಅಭಿಯಾನಗಳಿಗೆ ಇಂಡಿಯಾ ನಾಮಕರಣ ಮಾಡಿದ್ದಾರೆ. ಹಾಗಾದರೇ ಅದು ಏನು ಎಂದು ಖರ್ಗೆ ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಇತ್ತೀಚೆಗೆ ದೇಶಾದ್ಯಂತ 4500 ಕಿ.ಮೀ. ಪಾದಯಾತ್ರೆಯನ್ನು ಭಾರತ್ ಜೋಡೋ ಹೆಸರಿನಲ್ಲಿ ಮಾಡಿದ್ದೇವೆ. ಜೋಡೋ ಯಾತ್ರೆಯಲ್ಲಿ ಭಾರತ ಹೆಸರು ಹೆಚ್ಚು ಬಳಕೆ ಮಾಡಿದ್ದು ನಾವು ಎಂದು ಹೇಳಿದರು.

ಒಂದು ರಾಷ್ಟ್ರ ಒಂದು ಚುನಾವಣೆ ಭಾರತದಲ್ಲಿ ಸಾಧ್ಯವಿಲ್ಲ. ಹಲವು ಕಡೆ ವಿಧಾನಸಭಾ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಎಲ್ಲೆಡೆ ಏಕಕಾಲಕ್ಕೆ ಚುನಾವಣೆ ನಡೆಸಲು ಆಗಲ್ಲ. ವಿಧಾನಸಭೆಗಳು ವಿಸರ್ಜನೆ ಆಗುತ್ತವೆ. ರಾಷ್ಟ್ರಪತಿ ಆಡಳಿತ ಹೇರಲಾಗುತ್ತೆ. ಬದಲಾವಣೆ ಆಗುತ್ತಿರುತ್ತವೆ. ಇಂಥ ಬೃಹತ್ ರಾಷ್ಟ್ರದಲ್ಲಿ ಇದು ಸಾಧ್ಯವಿಲ್ಲ ಎಂದು ಹೇಳಿದರು.

ಜೆಡಿಎಸ್, ಬಿಜೆಪಿ ಹೊಂದಾಣಿಕೆ ಕುರಿತು ಸ್ಪಷ್ಟತೆ ಇಲ್ಲ. ಯಾವ ರೀತಿ ಪಾಲುದಾರಿಕೆ ಹೊಂದಿದ್ದಾರೆ. ಅವರ ವಿಚಾರಗಳ ಕುರಿತು ತಿಳಿದಿಲ್ಲ. ಅವರಿಬ್ಬರೂ ಒಂದಾಗಬಹುದು. ಅವರು ಸ್ವತಂತ್ರರು. ಆದರೆ ಇಡೀ ದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಶೇ.60 ಮತಗಳು ಇವೆ. ಎನ್.ಡಿ.ಎ. ಒಕ್ಕೂಟಕ್ಕೆ ಶೇ.40 ಮತಗಳು ಇವೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಒಂದಾಗಬಹುದು. ನಮ್ಮ ಇಂಡಿಯಾ ಒಕ್ಕೂಟದಲ್ಲಿ ಎಲ್ಲರನ್ನೂ ಒಗ್ಗೂಡಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ನಾವು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಯಶಸ್ಸು ಸಿಗಲಿದೆ. ಈಗಾಗಲೇ ಮೂರು ಸಭೆ ನಡೆಸಿದ್ದು, ನಾಲ್ಕನೇ ಮೀಟಿಂಗ್ ದಕ್ಷಿಣ ಭಾರತದಲ್ಲೇ ನಡೆಯಲಿದೆ. ಮನೆಗೆ ಯಚೂರಿ, ಶರದ್ ಪವಾರ್, ನಿತೀಶಕುಮಾರ, ಲಾಲೂ ಪ್ರಸಾದ ಯಾದವ್ ಅವರನ್ನು ಕರೆದು ಚರ್ಚೆ ನಡೆಸಿದ್ದೇವೆ. ಒಗ್ಗೂಡಿ ಸಾಗಲಿದ್ದೇವೆ ಎಂದು ಹೇಳಿದರು.

ಶಾಸಕ ಅಲ್ಲಮ ಪ್ರಭು ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಶರಣು ಮೋದಿ, ನೀಲಕಂಠರಾವ ಮೂಲಗೆ ಇದ್ದರು.