ಕೆ.ಆರ್.ಸಾಗರ: ಜಾತಿಗಣತಿಯನ್ನು ರಾಜಕೀಯವಾಗಿ ಚರ್ಚೆ ಮಾಡಲಾಗುತ್ತಿದ್ದು, ನಾನೊಬ್ಬ ಒಕ್ಕಲಿಗ ನಾಯಕನಾಗಿ ಜಾತಿ ಗಣತಿ ಬಗ್ಗೆ ಆತಂಕ ಬೇಡವೆಂದು ಹೇಳುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಇಲ್ಲಿನ ಬೃಂದಾವನ ಆವರಣದಲ್ಲಿ ಸೋಮವಾರ ಸಂಜೆ ವಿಶೇಷ ದೀಪಾಲಂಕಾರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ, ಒಕ್ಕಲಿಗ ಸಂಘ ಸಂಸ್ಥೆಗಳು ಜಾತಿ ಗಣತಿ ಬೇಡ ಎನ್ನುತ್ತಿವೆ. ಈಗಾಗಲೇ ಸಿಎಂಗೆ ಗಣತಿ ಮಾಹಿತಿ ನೀಡಲಾಗಿದ್ದು, ಇದನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗುತ್ತದೆ. ತಪ್ಪಿದ್ದರೆ ಸರಿಪಡಿಸಲಾಗುತ್ತೆ. ಪ್ರಸ್ತುತ ಜಾತಿ ಗಣತಿ ಮಾಹಿತಿಯನ್ನು ಮಂಡಿಸುವ ಪರಿಸ್ಥಿತಿ ಬರಬಹುದು ಎಂದರು.
ಎರಡೂ ಪಕ್ಷಗಳ ನಾಯಕರು ಸ್ವಾತಂತ್ರೃ ಬಂದ ಮೇಲೆ ಎಷ್ಟು ಸೀಟ್ ಗೆದ್ದಿದ್ದಾರೆ. ಬಿಜೆಪಿಯವರು 113 ದಾಟಿಲ್ಲ, ಜೆಡಿಎಸ್‌ನವರು 1994 ರಲ್ಲಿ ಪೂರ್ತಿ ಬಹುಮತ ಕೊಟ್ಟಿದ್ರೆ ಈ ರೀತಿ ಮಾತನಾಡಬಹುದಿತ್ತು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದ ಬಳಿ ಮಾತನಾಡಲು ಆಗದವರು ಮುಂದಿನ ಮೂರು ವರ್ಷ ಹೀಗೆ ಮಾತನಾಡಲಿ ಎಂದರು.
ಸಾರ್ವಜನಿಕ, ರಾಜ್ಯದ ಹಿತದೃಷ್ಟಿಯಿಂದ ಕ್ಯಾಬಿನೆಟ್‌ನಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಮಾಡಲಾಗುವುದು. ಬಳಿಕ ಸಿಎಂ ತೀರ್ಮಾನ ಮಾಡುತ್ತಾರೆ. ಇದರ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ದಲಿತ ಮುಖ್ಯಮಂತ್ರಿ ತೀರ್ಮಾನ ಪಕ್ಷದ ಹೈಕಮಾಂಡ್‌ಗೆ ಬಿಟ್ಟ ತೀರ್ಮಾನ. ಶಾಸಕರ ಅಭಿಪ್ರಾಯ ಪಡೆದ ಬಳಿಕ ಎಲ್ಲವೂ ನಡೆಯಲಿದೆ. ಸದ್ಯಕ್ಕೆ ಸಿಎಂ ಸೀಟ್ ಖಾಲಿ ಇಲ್ಲ. ಈ ಚರ್ಚೆ ಅನವಶ್ಯಕ. ಇದು ಮಾಧ್ಯಮದವರಿಗೆ ಬಿಸಿ ಸುದ್ದಿ ಅಷ್ಟೆ ಎಂದರು.
ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ: ಹೆದ್ದಾರಿ ಕಾಮಗಾರಿ ಕಳಪೆಯಾಗಿರುವ ಕುರಿತು ಸಾಕಷ್ಟು ಬಾರಿ ಚರ್ಚೆ ಮಾಡಿದ್ದೇವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ದೂರು ಕೊಟ್ಟಿದ್ದೇವೆ. ಆದರೆ ಹೆಚ್ಚು ಮನ್ನಣೆ ಕೊಟ್ಟಿಲ್ಲ. ಸಣ್ಣ ಪುಟ್ಟ ದೋಷ ಸರಿಪಡಿಸಲಾಗಿದ್ದು, ಇದರ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದರು.