ವಿರಾಜಪೇಟೆ : ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಲೋಕಸಭೆ ಚುನಾವಣೆ ಎದುರಿಸಿ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕರ ನಿವಾಸದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವಲಯ, ಬೂತ್, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯವರು ಧರ್ಮ ಆಧಾರಿತ ರಾಜಕೀಯ ಮಾಡುತ್ತಿದ್ದಾರೆ. ಇದು ಜನರಲ್ಲಿ ಸಂಘರ್ಷ ಮೂಡುವಂತೆ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 9 ತಿಂಗಳು ಸಮರ್ಥ ಆಡಳಿತ ನೀಡಿದೆ. 5 ಗ್ಯಾರಂಟಿಗಳನ್ನು ನೀಡಿದೆ. ಜನೋಪಯೋಗಿ ಕಾರ್ಯಕ್ರಮಗಳನ್ನು ಜನರ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಿ ಮತ ಪರಿವರ್ತನೆ ಮಾಡಬೇಕು ಎಂದು ಅವರು ಕಾರ್ಯಕರ್ತರಿಗೆ ಸೂಚಿಸಿದರು.ರಾಜಕೀಯ ಪಕ್ಷಗಳಿಗೆ ಟೀಕೆ, ಟಿಪ್ಪಣಿಗಳು ಸಹಜ. ಚುನಾವಣೆ ಹೊಸ್ತಿಲಲ್ಲಿ ನಾವಿರುವ ಸಂದರ್ಭದಲ್ಲಿ ಕಾರ್ಯಕರ್ತರು ಒಂದು ದಿನದ ನಾಯಕರಾಗಲು ಪ್ರಯತ್ನ ಮಾಡಬೇಡಿ. ಅಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚುನಾವಣೆ ಎದುರಿಸಿ. ಯಾವುದೇ ಗೊಂದಲವಿದ್ದರೂ ಚುನಾವಣೆ ನಂತರದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡೋಣ ಎಂದರು.
ನಮ್ಮೆಲ್ಲರ ಕರ್ತವ್ಯ : ಕಾಂಗ್ರೆಸ್ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ, 20 ವರ್ಷಗಳಿಂದ ಪಕ್ಷದ ಶಾಸಕರಿಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿತ್ತು. ಅದರೆ ಇದೀಗ ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡರಾದ ಅರುಣ್ ಮಾಚಯ್ಯ, ರಂಜಿ ಪೂಣಚ್ಚ, ಹನೀಫ್, ಕೊಳುಮಂಡ ರಫೀಕ್, ವಕೀಲ ರವಿಂದ್ರ ಇತರರು ಇದ್ದರು.