ಜಿಲ್ಲೆ

ರಾಜಕೀಯ ತರಬೇತಿ ಕೇಂದ್ರ ಸ್ಥಾಪನೆಸ್ಪೀಕರ್ ಯು.ಟಿ.ಖಾದರ್ ಮಾಹಿತಿ

ಹರೀಶ ಎಂ.

ಮಂಗಳೂರು: ರಾಜಕೀಯ ಕ್ಷೇತ್ರ ಪ್ರವೇಶಿಸುವ ಆಸಕ್ತ ಪದವೀಧರ ಯುವಕರಿಗೆ ರಾಜಕೀಯ ತರಬೇತಿ ಕೇಂದ್ರ ಸ್ಥಾಪಿಸಲು ಆಸಕ್ತಿ ವಹಿಸಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.


ಆರು ತಿಂಗಳು ಥಿಯರಿ ಹಾಗೂ ಆರು ತಿಂಗಳು ಪ್ರಾಕ್ಟಿಕಲ್ ಸೇರಿದಂತೆ ಒಂದು ವರ್ಷದ ಕೋರ್ಸು ಆಗಿರಲಿದೆ. ಶಾಸಕಾಂಗದ ಎಲ್ಲಾ ಮಜಲುಗಳ ಬಗ್ಗೆ ಅಧ್ಯಯನಕ್ಕೆ ಅವಕಾಶ ಇರಲಿದೆ. ರಾಜ್ಯದ ಕೇಂದ್ರ ಸ್ಥಾನದಲ್ಲಿ ಕೇಂದ್ರ ತೆರೆಯಲಾಗುವುದು. ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು ಎಂಬುದರ ಬಗ್ಗೆ ಇನ್ನೂ ಅಂತಿಮಗೊಂಡಿಲ್ಲ. ಯೋಜನೆ ಮಾತುಕತೆ ಹಂತದಲ್ಲಿದೆ ಎಂದವರು ಗುರುವಾರ ನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಪ್ರತಿಯೊಂದು ಕ್ಷೇತ್ರದಲ್ಲೂ ಪಠ್ಯ ವಿಷಯದ ಮೂಲಕ ಅಧ್ಯಯನಕ್ಕೆ ಅವಕಾಶ ಇದೆ. ಆದರೆ ರಾಜಕೀಯ ಕ್ಷೇತ್ರವನ್ನು ಕಲಿಯಲು ಯಾವುದೇ ಕೋರ್ಸ್‌ಗಳಿಲ್ಲ. ಹಿರಿಯರ ಅನುಭವ ನೋಡಿ, ಕೇಳಿ ತಿಳಿಯಬೇಕಿತ್ತು. ಈ ನಿಟ್ಟಿನಲ್ಲಿ ಹೊಸ ಚಿಂತನೆಯೊಂದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿದೆ. ನಾಯಕತ್ವ ಗುಣ ಹೊಂದಿದವರಿಗೆ ಜನಪ್ರತಿನಿಧಿಗಳಾಗುವ ಆಸಕ್ತರಿಗೆ ಈ ಕೋರ್ಸ್ ಪ್ರಯೋಜನಕಾರಿಯಾಗಲಿದೆ ಎಂದವರು ಹೇಳಿದರು.

ಜು.3ರಿಂದ ಅಧಿವೇಶನ: ರಾಜ್ಯ ವಿಧಾನ ಮಂಡಲಗಳ ಅಧಿವೇಶನ ಜು.3ರಿಂದ 14ರ ತನಕ ನಡೆಯಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಸದನಗಳನ್ನು ಉದ್ದೇಶಿಸಿ ಸಂದೇಶ ನೀಡುವರು. ಜು.7ರಂದು ಬಜೆಟ್ ಮಂಡನೆಯಾಗಲಿದೆ. ಕೊನೇ ದಿನದ ತನಕ ಶಾಸಕರು ಗೈರು ಹಾಜರಾಗದಂತೆ ಮಾಡಲು ಕಾರ್ಯ ಯೋಜನೆ ಮಾಡಿದ್ದೇವೆ ಎಂದು ಯು.ಟಿ.ಖಾದರ್ ಹೇಳಿದರು. ಕಾಂಗ್ರೆಸ್ ಮುಖಂಡರಾದ ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ರಮೇಶ್ ಶೆಟ್ಟಿ, ಸಂತೋಷ್ ಶೆಟ್ಟಿ ಮೊದಲಾದವರಿದ್ದರು.