ಕಡಬ ಪಪಂ ಅಧ್ಯಕ್ಷೆ ತಮನ್ನಾ ಜುಬಿನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ಅಕ್ಷತಾ ಬಾಲಕೃಷ್ಣ, ಸೈಮನ್ ಸಿ.ಜೆ., ನೀಲಾವತಿ ಶಿವರಾಮ್, ಕೃಷ್ಣಪ್ಪ ಬೈಲಂಗಡಿ, ರೋಹಿತ್ ಪಣೆಮಜಲು ಮೊದಲಾದವರಿದ್ದರು.
- ಘನ ತ್ಯಾಜ್ಯ ಘಟಕ ವಿಚಾರದಲ್ಲಿ ಆರೋಪ - ಪ್ರತ್ಯಾರೋಪ
- ಕಡಬ ಪಪಂ ಸಾಮಾನ್ಯ ಸಭೆ
ಕಡಬ: ಕೋಡಿಂಬಾಳದ ಕಕ್ಕೆತ್ತಿಮಾರ್‌ನಲ್ಲಿರುವ ಘನ ತ್ಯಾಜ್ಯ ಘಟಕದಲ್ಲಿನ ಅವ್ಯವಸ್ಥೆ ಬಗ್ಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿರುಸಿನ ಚರ್ಚೆ ನಡೆಯಿತು. ಈ ವೇಳೆ ಆಡಳಿತ ಸದಸ್ಯರ ‘ರಾಜಕೀಯ ಲಾಭ’ ಹೇಳಿಕೆ ವಿಪಕ್ಷ ಸದಸ್ಯರ ಆಕ್ರೋಶಕ್ಕೆ ತುತ್ತಾಗಿ ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತು.
ಕಡಬ ಪಪಂ ಅಧ್ಯಕ್ಷೆ ತಮನ್ನಾ ಜುಬಿನ್ ಅಧ್ಯಕ್ಷತೆಯಲ್ಲಿ ಪಪಂ ಸಭಾಂಗಣದಲ್ಲಿ ಸಭೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ್, ಹಿಂದೆ ಘನ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯದ ನಿರ್ವಹಣೆ ಚೆನ್ನಾಗಿ ನಡೆಯುತ್ತಿತ್ತು. ಆದರೆ ಪಪಂ ಅಸ್ತಿತ್ವಕ್ಕೆ ಬಂದ ಬಳಿಕ ಆಡಳಿತ ಮಂಡಳಿಯಿಲ್ಲದೆ ಅಧಿಕಾರಿಗಳ ತಪ್ಪಿನಿಂದಾಗಿ ಘಟಕದಲ್ಲಿ ಕಸದ ರಾಶಿ ಬಿದ್ದು ಅವ್ಯವಸ್ಥೆ ಆಗರವಾಗಿದೆ. ಈ ಬಗ್ಗೆ ಪಂಚಾಯಿತಿ ಸಭೆಯಲ್ಲಿ ತ್ಯಾಜ್ಯ ತೆರವಿಗೆ ನಿರ್ಣಯ ಅಂಗೀಕರಿಸಿ, ತ್ಯಾಜ್ಯ ತೆರವಿಗೆ ಸಿದ್ಧತೆ ಮಾಡಲಾಗಿತ್ತು. ಈ ಮಧ್ಯೆ ಪ್ರತಿಭಟನೆ ಮಾಡಲಾಗಿದ್ದು, ರಾಜಕೀಯಕ್ಕೋಸ್ಕರ ಮಾಡಲಾಗಿದೆ ಎಂದು ಆರೋಪಿಸಿದರು.
ವಿಪಕ್ಷ ಸದಸ್ಯೆ ಅಕ್ಷತಾ ಪ್ರತಿಕ್ರಿಯಿಸಿ, ನಾವೇನು ರಾಜಕೀಯ ಲಾಭಕ್ಕೋಸ್ಕರ ಮಾಡಿಲ್ಲ. ಕಳೆದ ಸಭೆಗಳಲ್ಲಿ ತ್ಯಾಜ್ಯ ತೆರವಿಗೆ ಆಗ್ರಹಿಸಿದ್ದೆ. ಎರಡು ಲೋಡು ತ್ಯಾಜ್ಯ ತೆರವು ಮಾಡಿ ಬಳಿಕ ಸ್ಥಗಿತವಾಗಿದೆ. ಇದರಿಂದ ಬೇಸತ್ತ ಆ ಭಾಗದ ಜನ ಪ್ರತಿಭಟನೆ ಮಾಡಿದ್ದಾರೆ. ಬಳಿಕ ತ್ಯಾಜ್ಯ ವಿಲೇಗೆ ಚಾಲನೆ ಸಿಕ್ಕಿದೆ. ಜನರು ತಮಗೆ ಆಗುತ್ತಿರುವ ತೊಂದರೆ ವಿರುದ್ಧ ಪ್ರತಿಭಟಿಸಿದರೆ ಅದು ಹೇಗೆ ರಾಜಕೀಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ದಯಾನಂದ ಪೊಯ್ಯೆತಡ್ಡ ಮಾತನಾಡಿ, ಪ್ರತಿಭಟನೆ ರಾಜಕೀಯ ಎಂದು ಹೇಳುವುದಾದರೆ ಕಳಾರದಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ವಿರೋಧಿಸಿದವರ ಹಿಂದೆ ಪಪಂ ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಇದ್ದಾರೆ ಎನ್ನುವ ಅರೋಪವಿದೆ, ಇದು ರಾಜಕೀಯ ಅಲ್ಲವಾ ಎಂದರು. ಈ ವೇಳೆ ಮಾತಿನ ಚಕಮಕಿ, ಆರೋಪ ಪ್ರತ್ಯಾರೋಪ ನಡೆದವು.
ಪಪಂ ವ್ಯಾಪ್ತಿಯಲ್ಲಿನ ಬೀದಿ ದೀಪಗಳ ನಿರ್ವಹಣೆ, ಪೌರ ಕಾರ್ಮಿಕರ ಕೊರತೆ, ಅಪಾಯಕಾರಿ ಮರಗಳ ತೆರವು, ಮೆಸ್ಕಾಂ ಲೈನ್‌ಮನ್‌ಗಳ ಕೊರತೆ, ರಸ್ತೆ ಪಕ್ಕದ ಚರಂಡಿಯ ಹೂಳೆತ್ತುವುದು ಇತ್ಯಾದಿ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸದಸ್ಯರಾದ ಅಕ್ಷತಾ ಬಾಲಕೃಷ್ಣ,ಸೈಮನ್ ಸಿ.ಜೆ., ಕೃಷ್ಣಪ್ಪ ಬೈಲಂಗಡಿ, ರೋಹಿತ್ ಪಣೆಮಜಲು, ಮಹಮ್ಮದ್ ಫೈಝಲ್, ಗುಣವತಿ ರಘುರಾಮ, ಮೋಹನ, ಕೃಷ್ಣಪ್ಪ ನಾಯ್ಕ, ಕುಸುಮಾ, ನಾಮ ನಿರ್ದೇಶಿತ ಸದಸ್ಯರಾದ ಫಝಲ್, ಮೋಹನದಾಸ, ಶಾಲಿನಿ, ಮುಖ್ಯಾಧಿಕಾರಿ ಲೀಲಾವತಿ ಇ., ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಸಿಬ್ಬಂದಿ ಬಾಲಕೃಷ್ಣ, ವಾರಿಜಾ, ಕೀರ್ತನ್, ಹರೀಶ್ ಇದ್ದರು.
ಘಟಕ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ
ಈ ಹಿಂದೆಯೇ ಕಕ್ಕೆತ್ತಿಮಾರ್ ಘನ ತ್ಯಾಜ್ಯ ಘಟಕದ ಬಳಿ ಮಲತ್ಯಾಜ್ಯ ಘಟಕ ಆರಂಭಿಸಲು 2.5 ಎಕರೆ ಜಾಗ ನಿಗದಿ ಮಾಡಲಾಗಿತ್ತು. ಅಲ್ಲಿ ಮರ ಇರುವುದರಿಂದ ಅರಣ್ಯ ಇಲಾಖೆ ಆಕ್ಷೇಪದ ಕಾರಣದಿಂದಾಗಿ ತಿಮರಡ್ಡದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಪ್ರಸ್ತುತ ತಿಮರಡ್ಡದಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು ಡಿಸಿ ಸೂಚನೆಯಂತೆ ಕಕ್ಕೆತ್ತಿಮಾರ್‌ನಲ್ಲಿ ನಿಗದಿತ ಜಾಗದಲ್ಲಿ ಅಧರ್ ಎಕರೆಯಲ್ಲಿ ಘಟಕ ಆರಂಭಿಸಲು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲಾಗುವುದು ಎಂದು ಪಪಂ ಇಂಜಿನಿಯರ್ ಶಿವಕುಮಾರ್ ಎಂ.ಆರ್. ಮಾಹಿತಿ ನೀಡಿದರು.