ಮಂಡ್ಯ: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಮಂಡ್ಯದಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದೆ. ಜತೆಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ತಂತ್ರಗಾರಿಕೆಗೆ ತಿರುಗೇಟು ನೀಡುವಂತೆ ಲಕ್ಷಾಂತರ ಜನರ ಸಮ್ಮುಖದಲ್ಲಿ ನಮೋ ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ತೆರೆದಿಟ್ಟರು.
ಜಿಲ್ಲೆಯಲ್ಲಿ ಕಮಲಕ್ಕೆ ನೆಲೆಯೇ ಇಲ್ಲ ಎನ್ನುತ್ತಿದ್ದ ಟೀಕಿಸುತ್ತಿದ್ದವರ ಎದುರು ನರೇಂದ್ರ ಮೋದಿ ಅವರ ವರ್ಚಸ್ಸು ಅನಾವರಣಗೊಂಡಿದೆ. ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ವೃದ್ಧಿಯಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ. ಬಿಜೆಪಿಯ ಎರಡು ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು ಕಮಲ ಪಾಳಯದಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಜತೆಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಹುಮ್ಮಸ್ಸನ್ನು ಹೆಚ್ಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬಿಜೆಪಿಗರಿಗೆ ಪ್ರತಿಷ್ಠೆಯಾಗಿದ್ದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡ ಕಣ್ಣಿಟ್ಟಿತ್ತು. ಈ ಕಾರಣದಿಂದಲೇ ರೋಡ್ ಶೋ ಬಗ್ಗೆ ಕೈ ಹಾಗೂ ದಳದ ನಾಯಕರು ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದರು. ಇನ್ನು ಪೊಲೀಸ್ ಭದ್ರತೆ ಬಿಗಿಗೊಳಿಸಿದ ಕಾರಣಕ್ಕೆ ನಿಗದಿ ಸಮಯ ಸಮೀಪಿಸುತ್ತಿದ್ದರೂ ರೋಡ್ ಶೋಗೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬಂದಿರಲಿಲ್ಲ. ಇದು ವಿಪಕ್ಷಗಳು ಬಿಜೆಪಿ ವಿರುದ್ಧ ಟೀಕಿಸಲು ಬಹುದೊಡ್ಡ ಆಹಾರವಾಗುವಂತಾಗಿತ್ತು. ಒಂದು ಹಂತದಲ್ಲಿ ಈ ಬೆಳವಣಿಗೆ ಕಮಲ ಪಾಳಯವನ್ನೂ ಆತಂಕಕ್ಕೆ ಸಿಲುಕಿಸಿತು. ಆದರೆ ಬಳಿಕ ನಡೆದಿದೆಲ್ಲ ವಿಸ್ಮಯದಂತಿತ್ತು. ರೋಡ್ ಶೋಗೆ ಜನರ ಆಗಮಿಸದಿರುವ ಬಗ್ಗೆ ಮಾಹಿತಿ ಪಡೆದಾಗ ಭದ್ರತೆಯಿಂದಾಗಿ ನಗರದೊಳಕ್ಕೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.
ಕೂಡಲೇ ಎಚ್ಚೆತ್ತ ಬಿಜೆಪಿಗರು ಜನರ ಪ್ರವೇಶಕ್ಕೆ ಅನುಮತಿ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದರು. ಅದರಂತೆ ಪ್ರವೇಶ ನೀಡಿದ ಬಳಿಕ ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷದೊಳಗೆ ನಗರದಲ್ಲಿ ಜನಸಂದಣಿ ತುಂಬಿ ತುಳುಕುವಂತಾಯಿತು. ಕೇವಲ ಮೂರ‌್ನಾಲ್ಕು ಸಾವಿರದಷ್ಟಿದ್ದ ಜನರ ಸಂಖ್ಯೆ ಸುಮಾರು 45 ಸಾವಿರವನ್ನು ದಾಟಿತು. ವಿವಿಧ ಭಾಗಗಳಿಂದ ಪ್ರವೇಶ ಪಡೆದ ಜನರು ಬ್ಯಾರಿಕೇಡ್ ಬಳಿ ಬಿಸಿಲಿನಲ್ಲಿ ಪ್ರಧಾನಿಗಾಗಿ ಕಾದು ನಿಂತರು. ನಿಗದಿತ ಸಮಯದಂತೆ ಮೋದಿ ರೋಡ್ ಶೋ ಆರಂಭವಾಯಿತು. ದಾರಿಯುದ್ದಕ್ಕೂ ನಿಂತಿದ್ದ ಜನರು ಹೂವಿನ ಮಳೆ ಸುರಿಸಿ ಹಾಗೂ ಜೈಕಾರ ಮೊಳಗಿಸಿದರು. ಈ ಬೆಳವಣಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಳಯಕ್ಕೂ ಶಾಕ್ ನೀಡಿತು.
ಬಿಜೆಪಿಗೆ ಜಿಲ್ಲೆಯಲ್ಲಿ ನೆಲೆ ಇಲ್ಲ, ಮೋದಿ ವರ್ಚಸ್ಸು ಮಂಡ್ಯದಲ್ಲಿ ನಡೆಯುವುದಿಲ್ಲವೆಂದು ಟೀಕಿಸುತ್ತಿದ್ದವರ ಎದುರು ನಮೋ ಶಕ್ತಿಯ ಅನಾವರಣಗೊಂಡಿತು. ವಿಶೇಷವೆಂದರೆ ಪಕ್ಷಾತೀತವಾಗಿ ಜನರು ಪ್ರಧಾನಿ ಅವರನ್ನು ನೋಡಲು ಬಂದಿದ್ದರು. ಅಂತೆಯೇ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆ ಕಡಿಮೆ ಇರಲಿಲ್ಲ. ಇದು ರೋಡ್ ಶೋ ಮಾತ್ರವಲ್ಲದೆ ವೇದಿಕೆ ಕಾರ್ಯಕ್ರಮದಲ್ಲಿಯೂ ಸಾಬೀತಾಗಿತ್ತು. ಅಲ್ಲಿಯೂ ಕೂಡ ನಿರೀಕ್ಷೆಗೂ ಮೀರಿದ ಜನರು ಆಗಮಿಸಿದರು.
ಮತ್ತೊಮ್ಮೆ ಯಶಸ್ವಿಯಾದ ಬಿಜೆಪಿ: ಮುಂಬರುವ ಚುನಾವಣಾ ದೃಷ್ಟಿಯಿಂದ ಹಳೆಯ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಒಂದೊಂದೆ ಕಾರ್ಯಕ್ರಮದ ಮೂಲಕ ನೆಲೆ ಭದ್ರಗೊಳಿಸಿಕೊಳ್ಳುತ್ತಿದೆ. ಅದರಂತೆ ಮಂಡ್ಯ ಜಿಲ್ಲೆಯೂ ಪ್ರಮುಖವಾಗಿರುವುದರಿಂದ ಹಿಂದುತ್ವದ ಆಧಾರದಲ್ಲಿ ಹಾಗೂ ಒಕ್ಕಲಿಗರ ಮನಗೆಲ್ಲಲ್ಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದಿದ್ದ ಸಂಕೀರ್ತನಾ ಯಾತ್ರೆ, ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಮಹಾಕುಂಭಮೇಳ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆದಿದ್ದ ಜನಸಂಕಲ್ಪ ಯಾತ್ರೆ ಅದ್ಭುತ ಯಶಸ್ಸು ಕಂಡಿತ್ತು. ಇದೀಗ ನಮೋ ಸಾರಥ್ಯದಲ್ಲಿ ಆಯೋಜಿಸಿದ್ದ ರೋಡ್ ಶೋ ಹಾಗೂ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಸಮಾರಂಭವೂ ಸಕ್ಸಸ್ ಆಗಿದೆ.
ಕೆಸಿಎನ್‌ಗೆ ಕಾಡಿದ ಒಂಟಿತನ: ಇನ್ನು ಬಿಜೆಪಿಗೆ ಬಿಟ್ಟು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಸಚಿವ ಕೆ.ಸಿ.ನಾರಾಯಣಗೌಡಗೆ ನಮೋ ವರ್ಚಸ್ಸು ಕಾಡುವಂತೆ ಮಾಡಿದೆ. ಅತ್ತ ವೇದಿಕೆಯಲ್ಲಿಯೂ ಕೆಸಿಎನ್‌ಗೆ ಒಬ್ಬೊಂಟಿಯಂತಿದ್ದರು. ಮೋದಿ ಬರುವ ಮುನ್ನವೇ ವೇದಿಕೆಗೆ ಬಂದಿದ್ದ ಅವರನ್ನು ಯಾರೊಬ್ಬರೂ ಸರಿಯಾಗಿ ಮಾತನಾಡಿಸಲಿಲ್ಲ. ಆದರೂ ತಮಗೆ ಮೀಸಲಾಗಿದ್ದ ಕುರ್ಚಿಯನ್ನು ನೋಡಿ ಬಳಿಕ ಸಚಿವ ಕೆ.ಗೋಪಾಲಯ್ಯ ಅವರ ಸಮೀಪ ಹೋಗಿ ಮಾತನಾಡಿಸಿದರು. ಜಿಲ್ಲೆಯ ಸಚಿವರಾದರೂ ಅಷ್ಟೊಂದು ಹೈಲೆಟ್ ಆಗಲೇ ಇಲ್ಲ.