ಅರಸೀಕೆರೆ: ಲೋಕಸಭೆ ಚುನಾವಣೆ ವೇಳೆ ಹಣ ಹಂಚಿಕೆ ಆಡಿಯೋ ಬಿಡುಗಡೆ ಕುರಿತು ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಕಡೆಗೂ ಮೌನ ಮುರಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಚುನಾವಣಾ ಫಲಿತಾಂಶ ಬಂದು ಐದಾರು ತಿಂಗಳು ಕಳೆದಿದೆ. ಇದೀಗ ಆಡಿಯೋ ಹರಿಬಿಟ್ಟಿರುವ ಹಿಂದೆ ರಾಜಕೀಯ ಕುತಂತ್ರ ಅಡಗಿದೆ. ನನ್ನ ಧ್ವನಿ ಅನುಕರಣೆ ಮಾಡಿದ್ದು ಲೋಕಾರೂಢಿ ಮಾತುಗಳನ್ನು ತಿರುಚಲಾಗಿದೆ. ಸಚಿವ ಸಂಪುಟ ಮರುರಚನೆ ವೇಳೆ ಅವಕಾಶ ತಪ್ಪಿಸಲು ಷಡ್ಯಂತ್ರ ಹೆಣೆದಿದ್ದಾರೆ. ಜೆಡಿಎಸ್ ಮುಖಂಡರು ದೂರು ನೀಡಿದರೆ ನಾನೇನು ಮಾಡಲಾಗದು. ಸರ್ಕಾರ ರಚನೆ ವೇಳೆ ಅವಕಾಶ ತಪ್ಪಿತ್ತು. ಹಣೆಯಲ್ಲಿ ಬರೆದಿದ್ದರೆ ಮಂತ್ರಿ ಆಗುವ ಅದೃಷ್ಟ ಕೈಗೂಡಲಿದೆ. ಪ್ರತಿನಿತ್ಯ ನೂರಾರು ಕಾರ್ಯಕರ್ತರು ಮನೆಗೆ ಬಂದು ಹೋಗುತ್ತಾರೆ. ಯಾರು ಏನು ಮಾಡುತ್ತಾರೆ ಎಂದು ಹೇಳಲಾಗದು. ಕುತಂತ್ರದ ಕುರಿತು ದೂರು ನೀಡುವ ಬಗ್ಗೆ ವಕೀಲರ ಜತೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ. ಇಂತಹ ಬೆಳವಣಿಗೆ ಮುಂದೆ ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ. ಆಡಿಯೋ ಕಟ್ ಅಂಡ್ ಎಡಿಟಿಂಗ್ ಮಾಡುವವರು ಇದ್ದಾರೆನ್ನುವುದು ಸಾಬೀತಾಗಿದೆ ಎಂದು ಹೇಳಿದರು.