ಜಿಲ್ಲೆ

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪ್ರಕಟ

ನಾಗಮಂಗಲ: ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾರೊಬ್ಬರ ಜೇಬಿಗೂ ಕೈ ಹಾಕಿಲ್ಲ. ಒಂದು ಗುತ್ತಿಗೆ ಕೆಲಸ ಮಾಡಿ ಹಣ ತೆಗೆದುಕೊಂಡಿಲ್ಲ. ಯಾರಿಂದಲೂ ಲಂಚ ಪಡೆದು ತೊಂದರೆ ಕೊಟ್ಟಿಲ್ಲ. 25 ವರ್ಷಗಳಿಂದ ಅಧಿಕಾರವಿಲ್ಲದಿದ್ದರೂ ಮನೆ ಮಗನಂತೆ ನಿರಂತರವಾಗಿ ಕ್ಷೇತ್ರದ ಜನಸೇವೆ ಮಾಡುತ್ತಿದ್ದೇನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.

ತಾಲೂಕಿನ ಭೀಮನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಅರೆತಿಮ್ಮಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಭೀಮನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನೊಬ್ಬ ಮಾಜಿ ಶಾಸಕ, ಮಾಜಿ ಸಂಸದ. ಕ್ಷೇತ್ರದ ಜನರ ಕೆಲಸಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಮಾಡಿಸುವ ಸಾಮರ್ಥ್ಯ ನನಗಿದೆಯೇ ಹೊರತು ತಾಲೂಕಿನಲ್ಲಿ ಬೇರೆ ಯಾರಿಗೂ ಇಲ್ಲ ಎಂದರು.

ನನ್ನನ್ನು ಬಿಟ್ಟು ಚಲುವರಾಯಸ್ವಾಮಿ ಅಥವಾ ಶಿವರಾಮೇಗೌಡರೊಂದಿಗೆ ಗುರುತಿಸಿಕೊಂಡರೆ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುವುದಿಲ್ಲವೆಂದು ಕೆಲವರನ್ನು ಶಾಸಕ ಸುರೇಶ್‌ಗೌಡ ಕಟ್ಟಿಹಾಕಿದ್ದಾರೆ.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಗರ್‌ಹುಕುಂ ಸಾಗುವಳಿಗೆ ಅರ್ಜಿ ಸಲ್ಲಿಸಿದ್ದ ರೈತರಿಗೆ 28 ಸಾವಿರ ಎಕರೆ ಜಮೀನು ಮಂಜೂರು ಮಾಡಿಸಿದ್ದೇನೆ. ಆದರೆ ಈಗ ತಾಲೂಕು ಭ್ರಷ್ಟಾಚಾರದ ಕೂಪವಾಗಿದೆ. 2023ಕ್ಕೆ ನನ್ನ ಸ್ಪರ್ಧೆ ಖಚಿತವಾಗಿದ್ದು ಜನತೆ ನನ್ನ ಕೈಹಿಡಿಯುವ ವಿಶ್ವಾಸವಿದೆ ಎಂದರು.

ಕ್ಷೇತ್ರಕ್ಕೆ ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 3 ತಿಂಗಳ ಹಿಂದೆಯೇ ಬೇರೆಯವರ ಮೂಲಕ ಕೇಳಿದ್ದರು. ಆದರೆ ಕ್ಷೇತ್ರದಲ್ಲಿ ಬಿಜೆಪಿಗೆ ಅಷ್ಟೊಂದು ಮಹತ್ವವಿಲ್ಲವೆಂದು ನಾನೇ ತಿರಸ್ಕರಿಸಿದ್ದೆ ಎಂದರು.

ಜೆಡಿಎಸ್ ಅಥವಾ ಕಾಂಗ್ರೆಸ್ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ!:

ಮುಂಬರುವ ಚುನಾವಣೆ ವೇಳೆಗೆ ಕ್ಷೇತ್ರದ ರಾಜಕಾರಣದಲ್ಲಿ ಏನು ಬೇಕಾದರೂ ಬದಲಾವಣೆ ಆಗಬಹುದು. ಕೊನೇ ಕ್ಷಣದಲ್ಲಿ ನಾನೇ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದರೂ ಅಚ್ಚರಿಪಡಬೇಕಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಸರಿ ಚುನಾವಣೆಗೆ ಸ್ಪರ್ಧಿಸಿ ಶಾಸಕನಾಗಿ ನಿಮ್ಮ ಸೇವೆ ಮಾಡುವುದಂತೂ ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.

ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್‌ಗೌಡ ಮಾತನಾಡಿ, 2023ರ ಚುನಾವಣೆಗೆ ನನ್ನ ತಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಶತಸಿದ್ಧ. ನಮ್ಮ ಮುಂದೆ ಯಾವ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷವೂ ಇಲ್ಲ. ನಮಗೆ ನೀವೇ ಹೈಕಮಾಂಡ್, ನೀವೇ ಬಿ ಫಾರ್ಮ್, ನೀವೇ ದೇವರು. ಹಾಗಾಗಿ ಈ ಚುನಾವಣೆಯಲ್ಲಿ ಶಿವರಾಮೇಗೌಡರನ್ನು ಗೆಲ್ಲಿಸುವ ಮೂಲಕ ತಾಲೂಕಿನ ಜನರ ಸ್ವಾಭಿಮಾನ ಏನೆಂಬುದನ್ನು ಇತರ ರಾಜಕೀಯ ಪಕ್ಷಗಳಿಗೆ ತೋರಿಸಿಕೊಡಬೇಕೆಂದು ವಿನಂತಿಸಿದರು.

ತಾ.ಪಂ. ಮಾಜಿ ಸದಸ್ಯ ಹೇಮರಾಜು, ವಕೀಲ ಟಿ.ಕೆ.ರಾಮೇಗೌಡ, ಮುಖಂಡ ರಾಮಸ್ವಾಮಿ ಮಾತನಾಡಿದರು. ಮುಖಂಡರಾದ ಬಿದರಕೆರೆ ಮಂಜೇಗೌಡ, ಪಾಳ್ಯ ರಘು, ಕೆಂಪೇಗೌಡ, ಶಿವಣ್ಣ, ಪಂಚಲಿಂಗ, ಕೃಷ್ಣಮೂರ್ತಿ, ಲಕ್ಷ್ಮಣ, ನಾಗರಾಜು, ಶಿವಣ್ಣ, ಶಂಕರ್, ಪ್ರಕಾಶ್, ಚೇತನ್, ಸೋಮು ಹಾಗೂ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.