ಮಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಜ್ಞಾನ ಅಗತ್ಯವಾಗಿದ್ದು, ರಾಜ್ಯಶಾಸ್ತ್ರ ವಿಷಯದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಹೆಚ್ಚಾಗಿ ಬೋಧಿಸುವಂತಾಗಬೇಕು. ಇದರಿಂದ ಪ್ರಮುಖ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುವುದರೊಂದಿಗೆ ಉಪನ್ಯಾಸಕರಿಗೂ ಉದ್ಯೋಗಾವಕಾಶ ಸೃಷ್ಟಿಯಾದಂತಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ನಿವೃತ್ತ ಪ್ರಾಧ್ಯಾಪಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜಾರಾಮ್ ತೋಳ್ಪಾಡಿ, ನಿವೃತ್ತ ಪ್ರಾಂಶುಪಾಲ ಪ್ರೊ.ಕ್ಸೇವಿಯರ್ ಡಿಸೋಜ, ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ದಿನೇಶ್ ಹೆಗ್ಡೆ, ಹಿರಿಯ ಪ್ರಾಧ್ಯಾಪಕಿ ಡಾ.ಲತಾ ಎ.ಪಂಡಿತ್, ಪ್ರೊ.ದಯಾನಂದ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
2019ರ ಬಳಿಕ ನಿವೃತ್ತರಾದ ರಾಜ್ಯಶಾಸ್ತ್ರ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ನಿಧನರಾದ ವಿವಿ ಮಟ್ಟದ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಹಾವೀರ ಕಾಲೇಜಿನ ಡಾ.ಪ್ರವೀಣ ಕೆ ಮತ್ತು ಉಡುಪಿ ಎಂಜಿಎಂ ಕಾಲೇಜಿನ ವಿದ್ಯಾನಾಥ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷೆ ಡಾ.ಶಾನಿ ಕೆ.ಆರ್ ಸ್ವಾಗತಿಸಿದರು. ಕೆನರಾ ಕಾಲೇಜಿನ ಡಾ.ಗಣೇಶ್ ಶೆಟ್ಟಿ ವಂದಿಸಿದರು. ಕೋಟ ಪಡುಕೆರೆಯ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು.